Wednesday, May 20

ನೀಟ್ ಅಭ್ಯರ್ಥಿಗಳಿಗೆ ಧೈರ್ಯ ತುಂಬಿದ ಅರವಿಂದ್ ಕೇಜ್ರಿವಾಲ್

ನವದೆಹಲಿ: ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್ ರದ್ದತಿಯಿಂದ ಆತಂಕಗೊಂಡಿರುವ ವಿದ್ಯಾರ್ಥಿಗಳಿಗೆ ಆಮ್ ಆದ್ಮಿ ಪಕ್ಷದ ಸಂಚಾಲಕ ಹಾಗೂ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಧೈರ್ಯ ತುಂಬಿದ್ದಾರೆ. ಜೂನ್ 21 ರಂದು ನಡೆಯಲಿರುವ ಮರುಪರೀಕ್ಷೆಗೆ ಸಿದ್ಧತೆ ಮುಂದುವರಿಸುವಂತೆ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣ X ನಲ್ಲಿ ಪೋಸ್ಟ್ ಮಾಡಿರುವ ಕೇಜ್ರಿವಾಲ್, ನೀಟ್ ವಿವಾದ ಕುರಿತು ತಾವು ಹಂಚಿಕೊಂಡ ವಿಡಿಯೊಗೆ ಬಂದ ಪ್ರತಿಕ್ರಿಯೆಗಳು ಭಾವುಕಗೊಳಿಸಿವೆ ಎಂದು ಹೇಳಿದ್ದಾರೆ.

“ಪ್ರಿಯ ನೀಟ್ ವಿದ್ಯಾರ್ಥಿಗಳೇ, ನಿಮ್ಮ ಭಾವನೆಗಳು ಮತ್ತು ಪ್ರತಿಕ್ರಿಯೆಗಳು ನನ್ನ ಮನಸ್ಸಿಗೆ ತಟ್ಟಿವೆ. ನೀವು ನನ್ನ ಮೇಲೆ ನಂಬಿಕೆ ಇಟ್ಟಿದ್ದೀರಿ, ಧನ್ಯವಾದಗಳು. ಧೈರ್ಯವಾಗಿರಿ. ‘ಡಾಕ್ಟರ್ ಆಗಿಯೇ ತೀರುತ್ತೇವೆ’ ಎಂಬ ಸಂಕಲ್ಪ ಮಾಡಿಕೊಳ್ಳಿ. ದೇವರು ನಿಮ್ಮೆಲ್ಲರನ್ನು ಆಶೀರ್ವದಿಸಲಿ” ಎಂದು ಅವರು ಬರೆದುಕೊಂಡಿದ್ದಾರೆ.

ನೀಟ್ ವಿವಾದ ಕುರಿತ ತಮ್ಮ ಹಿಂದಿನ ವಿಡಿಯೊವನ್ನು 50 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಸಾವಿರಾರು ವಿದ್ಯಾರ್ಥಿಗಳು ತಮ್ಮ ಆತಂಕ ಮತ್ತು ನೋವನ್ನು ಹಂಚಿಕೊಂಡಿದ್ದಾರೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.

ವಿದ್ಯಾರ್ಥಿಗಳನ್ನು “ತಮ್ಮ ಮಕ್ಕಳೇ” ಎಂದು ಉಲ್ಲೇಖಿಸಿದ ಅವರು, “ನನಗೂ ಇಬ್ಬರು ಮಕ್ಕಳು ಇದ್ದಾರೆ. ಅವರು ಇಬ್ಬರೂ ಐಐಟಿಯಲ್ಲಿ ಓದಿದ್ದಾರೆ. ಅವರ ಪರೀಕ್ಷೆ ರದ್ದಾಗಿದ್ದರೆ ನನಗೂ ಇದೇ ರೀತಿಯ ನೋವಾಗುತ್ತಿತ್ತು. ನೀವೆಲ್ಲರೂ ನನ್ನ ಮಕ್ಕಳೇ” ಎಂದು ಭಾವನಾತ್ಮಕವಾಗಿ ಹೇಳಿದ್ದಾರೆ.