Monday, September 21

ಪಿಥೋರಗಢದಲ್ಲಿ ಭಾರತ–ಮಂಗೋಲಿಯಾ ಜಂಟಿ ಸೇನಾ ಕವಾಯತು ಆರಂಭ

ಪಿಥೋರಗಢ: ಉತ್ತರಾಖಂಡದ ಪಿಥೋರಗಢದಲ್ಲಿರುವ ವಿದೇಶಿ ತರಬೇತಿ ನೋಡ್‌ನಲ್ಲಿ ಭಾರತ–ಮಂಗೋಲಿಯಾ ಜಂಟಿ ಸೇನಾ ವ್ಯಾಯಾಮ ‘ನೊಮಾಡಿಕ್ ಎಲಿಫೆಂಟ್‌’ನ 18ನೇ ಆವೃತ್ತಿ ಸೋಮವಾರ ಆರಂಭಗೊಂಡಿದೆ. ಸೆಪ್ಟೆಂಬರ್ 21ರಿಂದ ಅಕ್ಟೋಬರ್ 3ರವರೆಗೆ ನಡೆಯಲಿರುವ ಕವಾಯತಿನಲ್ಲಿ ಉಭಯ ದೇಶಗಳ ತಲಾ 45 ಯೋಧರು ಭಾಗವಹಿಸುತ್ತಿದ್ದಾರೆ.

ವಾರ್ಷಿಕ ಪ್ಲಟೂನ್ ಮಟ್ಟದ ಈ ಸೇನಾ ವ್ಯಾಯಾಮವನ್ನು ಭಾರತ ಮತ್ತು ಮಂಗೋಲಿಯಾ ಪರ್ಯಾಯವಾಗಿ ಆಯೋಜಿಸುತ್ತಿವೆ. ಇದರ ಹಿಂದಿನ ಆವೃತ್ತಿ 2025ರ ಮೇ–ಜೂನ್‌ನಲ್ಲಿ ಮಂಗೋಲಿಯಾದ ಉಲಾನ್‌ಬಾತರ್‌ನಲ್ಲಿ ನಡೆದಿತ್ತು.

ವಿಶ್ವಸಂಸ್ಥೆಯ ಆದೇಶದಡಿ ಅರೆ-ನಗರ ಮತ್ತು ಪರ್ವತ ಪ್ರದೇಶಗಳಲ್ಲಿ ಬಂಡಾಯ ನಿಗ್ರಹ ಕಾರ್ಯಾಚರಣೆ ನಡೆಸುವ ಎರಡೂ ಸೇನೆಗಳ ಸಾಮರ್ಥ್ಯ ಹೆಚ್ಚಿಸುವುದು ಕವಾಯತಿಯ ಪ್ರಮುಖ ಉದ್ದೇಶವಾಗಿದೆ.

ತರಬೇತಿಯಲ್ಲಿ ಯುದ್ಧತಂತ್ರದ ಮಟ್ಟದ ಕಾರ್ಯಾಚರಣೆಗಳು, ಉತ್ತಮ ಕಾರ್ಯವಿಧಾನಗಳ ಹಂಚಿಕೆ, ಕಾರ್ಯಾಚರಣಾ ಕವಾಯತುಗಳ ಪರಿಷ್ಕರಣೆ ಹಾಗೂ ಎರಡೂ ಸೇನೆಗಳ ನಡುವಿನ ಪರಸ್ಪರ ಕಾರ್ಯಸಾಧ್ಯತೆ ಹೆಚ್ಚಿಸುವುದಕ್ಕೆ ಆದ್ಯತೆ ನೀಡಲಾಗುತ್ತದೆ.

ಕಾರ್ಡನ್‌ ಮತ್ತು ಶೋಧ ಕಾರ್ಯಾಚರಣೆ, ಕೊಠಡಿ ಪ್ರವೇಶ ಕವಾಯತು ಹಾಗೂ ವಿಶೇಷ ಹೆಲಿಬೋರ್ನ್‌ ಕಾರ್ಯಾಚರಣೆಗಳ ಕುರಿತು ಯೋಧರಿಗೆ ತರಬೇತಿ ನೀಡಲಾಗುತ್ತದೆ. ಜತೆಗೆ ಸೈಬರ್‌ ಭದ್ರತೆ, ಡ್ರೋನ್‌ ಕಾರ್ಯಾಚರಣೆ ಮತ್ತು ಕೌಂಟರ್‌-ಡ್ರೋನ್‌ ವ್ಯವಸ್ಥೆಗಳ ಬಗ್ಗೆಯೂ ತರಬೇತಿ ನಡೆಯಲಿದೆ.

ವಾಸ್ತವಿಕ ಕಾರ್ಯಾಚರಣಾ ಸನ್ನಿವೇಶಗಳನ್ನು ಆಧರಿಸಿ ಜಂಟಿ ಕವಾಯತು ನಡೆಸುವ ಮೂಲಕ ಪರಸ್ಪರ ಕಾರ್ಯವಿಧಾನಗಳನ್ನು ಅರ್ಥಮಾಡಿಕೊಳ್ಳಲು ಹಾಗೂ ಸಮನ್ವಯದಿಂದ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಎರಡೂ ಪಡೆಗಳಿಗೆ ಅವಕಾಶ ದೊರೆಯಲಿದೆ.

ಈ ವ್ಯಾಯಾಮವು ಭಾರತ–ಮಂಗೋಲಿಯಾ ನಡುವಿನ ರಕ್ಷಣಾ ಸಹಕಾರವನ್ನು ಮತ್ತಷ್ಟು ಬಲಪಡಿಸುವುದರ ಜತೆಗೆ, ಎರಡೂ ದೇಶಗಳ ನಡುವಿನ ದೀರ್ಘಕಾಲದ ಸ್ನೇಹ ಮತ್ತು ಪರಸ್ಪರ ನಂಬಿಕೆಯನ್ನು ಗಟ್ಟಿಗೊಳಿಸುವ ಉದ್ದೇಶ ಹೊಂದಿದೆ.