Monday, July 6

ಮುಂಬೈನಲ್ಲಿ ಮಳೆಯ ಆರ್ಭಟ; ಕಟ್ಟಡ ಕುಸಿದು 6 ಸಾವು, ಜನಜೀವನ ಅಸ್ತವ್ಯಸ್ತ

ಮುಂಬೈ: ಧಾರಾಕಾರ ಮಳೆಯಿಂದ ಮಹಾರಾಷ್ಟ್ರದ ರಾಜಧಾನಿ ಮುಂಬೈ ತತ್ತರಿಸಿದೆ. ಭಾನುವಾರ ಮುಂಬೈನ ಹಲವು ಭಾಗಗಳಲ್ಲಿ 200 ರಿಂದ 300 ಮಿ.ಮೀ.ವರೆಗೆ ಮಳೆಯಾಗಿದೆ ಎಂದು ಅಂದಾಜಿಸಲಾಗಿದೆ. ಸೋಮವಾರವೂ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ನಿರಂತರ ಮಳೆ ಸಂದರ್ಭದಲ್ಲಿ ಮನ್ಖುರ್ಡ್ ಪ್ರದೇಶದಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ಆರು ಮಂದಿ ಮೃತಪಟ್ಟಿದ್ದಾರೆ. ಓರ್ವ ಗಾಯಗೊಂಡಿದ್ದು, ಮತ್ತೊಬ್ಬರು ಅವಶೇಷಗಳಡಿ ಸಿಲುಕಿರುವ ಶಂಕೆ ಹಿನ್ನೆಲೆಯಲ್ಲಿ ಎನ್‌ಡಿಆರ್‌ಎಫ್‌, ಅಗ್ನಿಶಾಮಕ ದಳ, ಬಿಎಂಸಿ ಹಾಗೂ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಭಾನುವಾರ ರಾತ್ರಿ ಮನ್ಖುರ್ಡ್‌ನ ಜನತಾ ನಗರದಲ್ಲಿ ಹನುಮಾನ್ ಮಂದಿರದ ಸಮೀಪ ಕಟ್ಟಡದ ಒಂದು ಭಾಗ ಏಕಾಏಕಿ ಕುಸಿದಿದೆ. ಅವಶೇಷಗಳಡಿಯಿಂದ ನಾಲ್ವರು ಮಹಿಳೆಯರು ಮತ್ತು ಇಬ್ಬರು ಪುರುಷರ ಮೃತದೇಹಗಳನ್ನು ಹೊರತೆಗೆಯಲಾಗಿದೆ.

ಈ ನಡುವೆ, ಮಳೆಯ ಅಬ್ಬರದಿಂದ ನಗರದಲ್ಲಿ ರಸ್ತೆ ಜಲಾವೃತಗೊಂಡಿದ್ದು, ವಾಹನ ಸಂಚಾರ ಹಾಗೂ ಜನಜೀವನ ಅಸ್ತವ್ಯಸ್ತವಾಗಿದೆ. ಹಲವು ಪ್ರದೇಶಗಳಲ್ಲಿ ಮರಗಳು ಧರೆಗುರುಳಿದ್ದು, ಕುರ್ಲಾದಲ್ಲಿ ಮರ ಬಿದ್ದು 63 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ನವಿ ಮುಂಬೈನ ವಾಶಿಯಲ್ಲಿ ಬಾಲ್ಕನಿ ಸ್ಲ್ಯಾಬ್ ಕುಸಿದು ಮತ್ತೊಬ್ಬರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.