Saturday, August 8

ವಿಳಂಬಿತ ಪಾವತಿ ವಿವಾದಕ್ಕೆ ಕಡಿವಾಣ; MSMEಗಳಿಗೆ ಆನ್‌ಲೈನ್ ಪರಿಹಾರ ವ್ಯವಸ್ಥೆ

ನವದೆಹಲಿ: ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (MSME) ಕಾನೂನು ಚೌಕಟ್ಟನ್ನು ಬಲಪಡಿಸುವ ಹಾಗೂ ಸಣ್ಣ ಉದ್ಯಮಗಳಿಗೆ ವಿಳಂಬವಾಗುತ್ತಿರುವ ಪಾವತಿಗಳ ಸಮಸ್ಯೆ ಪರಿಹರಿಸುವ ಉದ್ದೇಶದ MSMED (ತಿದ್ದುಪಡಿ) ಮಸೂದೆ-2026 ಅನ್ನು ಸಂಸತ್ತು ಅಂಗೀಕರಿಸಿದೆ.

ಆಗಸ್ಟ್ 3ರಂದು ರಾಜ್ಯಸಭೆ ಮಸೂದೆಗೆ ಅನುಮೋದನೆ ನೀಡಿದ ಬಳಿಕ, ಆಗಸ್ಟ್ 7ರಂದು ಲೋಕಸಭೆಯೂ ಅಂಗೀಕರಿಸಿದೆ. 2006ರಲ್ಲಿ ಜಾರಿಗೆ ಬಂದ MSMED ಕಾಯ್ದೆಗೆ ಎರಡು ದಶಕಗಳ ಬಳಿಕ ತಂತ್ರಜ್ಞಾನ, ಡಿಜಿಟಲ್ ವ್ಯವಸ್ಥೆ ಹಾಗೂ ಬದಲಾಗುತ್ತಿರುವ ವ್ಯವಹಾರ ಪರಿಸ್ಥಿತಿಗೆ ಅನುಗುಣವಾಗಿ ಹಲವು ಪ್ರಮುಖ ಬದಲಾವಣೆಗಳನ್ನು ತರಲಾಗಿದೆ.

ಸರ್ಕಾರದ ಪ್ರಕಾರ, ಉದ್ಯಮ ಪೋರ್ಟಲ್‌ನಲ್ಲಿ ನೋಂದಾಯಿತ MSMEಗಳ ಸಂಖ್ಯೆ 2023ರ ಏಪ್ರಿಲ್‌ನಲ್ಲಿದ್ದ 1.65 ಕೋಟಿಯಿಂದ 9.16 ಕೋಟಿಗೆ ಏರಿಕೆಯಾಗಿದ್ದು, ಈ ವಲಯವು 40 ಕೋಟಿಗೂ ಹೆಚ್ಚು ಜನರಿಗೆ ಉದ್ಯೋಗ ಒದಗಿಸುತ್ತಿದೆ.

ತಿದ್ದುಪಡಿಯ ಪ್ರಮುಖ ಅಂಶಗಳಲ್ಲಿ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ ಸಂಬಂಧಿಸಿದ ಪಾವತಿ ವಿವಾದಗಳನ್ನು ತ್ವರಿತವಾಗಿ ಬಗೆಹರಿಸುವ ವ್ಯವಸ್ಥೆ ಸೇರಿದೆ. ಆನ್‌ಲೈನ್ ವಿವಾದ ಪರಿಹಾರ (ODR) ವ್ಯವಸ್ಥೆ ಪರಿಚಯಿಸಲಾಗಿದ್ದು, ಮಧ್ಯಸ್ಥಿಕೆ ಹಾಗೂ ತೀರ್ಪು ಪ್ರಕ್ರಿಯೆಗೆ ನಿರ್ದಿಷ್ಟ ಕಾಲಮಿತಿ ನಿಗದಿಪಡಿಸಲಾಗಿದೆ.

ಆರು ತಿಂಗಳಿಗೂ ಹೆಚ್ಚು ಕಾಲ ತೀರ್ಪು ಅಥವಾ ಆದೇಶ ಪ್ರಶ್ನಿಸಿ ಅರ್ಜಿ ಬಾಕಿಯಿದ್ದರೆ, ಸಂಬಂಧಿತ ನ್ಯಾಯಾಲಯವು ವಿವಾದಿತ ಮೊತ್ತದ ಕನಿಷ್ಠ 50% ಅನ್ನು ಸೂಕ್ಷ್ಮ ಅಥವಾ ಸಣ್ಣ ಉದ್ಯಮಕ್ಕೆ ಪಾವತಿಸುವಂತೆ ಆದೇಶಿಸಬಹುದು.

ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳು (CPSEs), MSMEಗಳಿಂದ ಖರೀದಿಸುವ ಸರಕು ಮತ್ತು ಸೇವೆಗಳ ಇನ್‌ವಾಯ್ಸ್‌ಗಳನ್ನು TReDS ಮೂಲಕ ಇತ್ಯರ್ಥಗೊಳಿಸುವಂತೆ ತಿದ್ದುಪಡಿ ಮಸೂದೆ ಉತ್ತೇಜಿಸುತ್ತದೆ.

TReDS ಮೂಲಕ ನಡೆದ ಇನ್‌ವಾಯ್ಸ್ ರಿಯಾಯಿತಿ 2022-23ರಲ್ಲಿ ₹40,000 ಕೋಟಿಯಿಂದ 2025-26ರಲ್ಲಿ ₹3.47 ಲಕ್ಷ ಕೋಟಿಗೆ ಏರಿಕೆಯಾಗಿದೆ ಎಂದು ಸರ್ಕಾರ ತಿಳಿಸಿದೆ.

ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳ ಸೌಲಭ್ಯ ಮಂಡಳಿಗಳ (MSEFC) ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಗೊಳಿಸಲಾಗಿದ್ದು, ರಾಜ್ಯ ಸರ್ಕಾರಗಳಿಗೆ ಅಗತ್ಯವಿದ್ದಲ್ಲಿ ಒಂದಕ್ಕಿಂತ ಹೆಚ್ಚು ಮಂಡಳಿಗಳನ್ನು ಸ್ಥಾಪಿಸಲು ಅವಕಾಶ ಕಲ್ಪಿಸಲಾಗಿದೆ.

ಇದೇ ವೇಳೆ, ಕೆಲವು ಸಣ್ಣ ಉಲ್ಲಂಘನೆಗಳಿಗೆ ಇದ್ದ ಕ್ರಿಮಿನಲ್ ದಂಡಗಳನ್ನು ತೆಗೆದುಹಾಕಿ, ಶ್ರೇಣೀಕೃತ ಸಿವಿಲ್ ದಂಡ ಜಾರಿಗೆ ತರಲಾಗಿದೆ.

ಔಪಚಾರಿಕೀಕರಣ, ಉದ್ಯಮಗಳ ವೇಗದ ಬೆಳವಣಿಗೆ, ಸಮಯಕ್ಕೆ ಸರಿಯಾದ ಪಾವತಿ, ನಿಯಮ ಪಾಲನೆ ಹಾಗೂ ವ್ಯವಹಾರ ನಡೆಸುವ ಸುಲಭತೆಯನ್ನು ಉತ್ತೇಜಿಸುವುದು ತಿದ್ದುಪಡಿಗಳ ಪ್ರಮುಖ ಉದ್ದೇಶವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.