Tuesday, May 5

ಶೃಂಗೇರಿಯಲ್ಲಿ ಕಾಂಗ್ರೆಸ್ ಮೂಕವಾಗಿದೆ, ಸತ್ಯಕ್ಕೆ ಗೆಲುವು ಸಿಕ್ಕಿದೆ; ಅಶೋಕ್ ಪ್ರತಿಕ್ರಿಯೆ

ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರುಎಣಿಕೆ ಫಲಿತಾಂಶದ ಕುರಿತು ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣ ‘X’ನಲ್ಲಿ ಟ್ವೀಟ್ ಮಾಡಿದ ಅವರು, “ಶೃಂಗೇರಿಯಲ್ಲಿ ಕಾಂಗ್ರೆಸ್ ಮೂಕವಾಗಿದೆ – ಸತ್ಯಕ್ಕೆ ಗೆಲುವು!” ಎಂದು ಹೇಳಿದ್ದು, ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

“ಶೃಂಗೇರಿ ಮರುಎಣಿಕೆ ಫಲಿತಾಂಶಗಳು ಕಾಂಗ್ರೆಸ್ ಪಕ್ಷದ ಕರಾಳ ಮುಖವನ್ನು ಮತ್ತೊಮ್ಮೆ ಬಹಿರಂಗಪಡಿಸಿವೆ. ಜನರ ಜನಾದೇಶವನ್ನು ವಂಚಿಸಲು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ನ್ಯಾಯಾಂಗವು ಈಗ ಸೂಕ್ತ ಉತ್ತರ ನೀಡಿದೆ,” ಎಂದು ಅವರು ಆರೋಪಿಸಿದ್ದಾರೆ.

2023ರ ಚುನಾವಣೆಯಲ್ಲಿ 279 ಅಂಚೆ ಮತಗಳನ್ನು ಅಕ್ರಮವಾಗಿ ತಿರಸ್ಕರಿಸಿ ಜನಾದೇಶವನ್ನು ಕದ್ದಿದ್ದಾರೆ ಎಂದು ಆರೋಪಿಸಿರುವ ಅವರು, ಆ ವೇಳೆ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರ ಅರ್ಜಿಯನ್ನು ವಜಾಗೊಳಿಸಿ ಕಾಂಗ್ರೆಸ್‌ನ ಟಿ.ಡಿ. ರಾಜೇಗೌಡ ಅವರನ್ನು ವಿಜೇತರಾಗಿ ಘೋಷಿಸಲಾಯಿತು ಎಂದು ಹೇಳಿದ್ದಾರೆ.

ಹೈಕೋರ್ಟ್‌ಗೆ ಮೊರೆ ಹೋಗಿದ ಜೀವರಾಜ್ ಅವರ ಹೋರಾಟದ ಹಿನ್ನೆಲೆಯಲ್ಲಿ ಮರುಎಣಿಕೆ ನಡೆದಿದ್ದು, ನ್ಯಾಯಮೂರ್ತಿ ಆರ್. ನಟರಾಜ್ ಅವರ ಆದೇಶದಂತೆ ಕಾಂಗ್ರೆಸ್‌ನ ವಂಚನೆ ಬಯಲಾಗಿದೆ ಎಂದು ಅಶೋಕ್ ಅಭಿಪ್ರಾಯಪಟ್ಟಿದ್ದಾರೆ.

“ಇದು ಕೇವಲ ಒಬ್ಬ ವ್ಯಕ್ತಿಯ ಗೆಲುವಲ್ಲ; ಪ್ರಜಾಪ್ರಭುತ್ವದ ಗೆಲುವು. ಶೃಂಗೇರಿ ಮತದಾರರ ತೀರ್ಪಿಗೆ ಸಿಕ್ಕ ನ್ಯಾಯ,” ಎಂದು ಅವರು ಹೇಳಿದ್ದಾರೆ.

ನ್ಯಾಯಾಂಗದ ಮೇಲೆ ನಂಬಿಕೆ ಇಟ್ಟು ಹೋರಾಟ ನಡೆಸಿದ ಜೀವರಾಜ್ ಅವರಿಗೆ ಅಭಿನಂದನೆ ಸಲ್ಲಿಸಿದ ಅವರು, “ಸತ್ಯ ಮಾತ್ರ ಗೆಲ್ಲುತ್ತದೆ” ಎಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.