
ಹಾಸನ: ಕರ್ನಾಟಕದಲ್ಲಿ ಸಚಿವ ಸಂಪುಟ ಪುನಾರಚನೆ ಬೆನ್ನಲ್ಲೇ ಕಾಂಗ್ರೆಸ್ನಲ್ಲಿ ಅಸಮಧಾನ ಸ್ಫೋಟಗೊಂಡಿದೆ. ಮಂತ್ರಿ ಸ್ಥಾನ ಸಿಗದ ಶಾಸಕರು ಪಕ್ಷದ ನಡೆಗೆ ಬೇಸರಗೊಂಡಿದ್ದು, ಅನೇಕರು ರಾಜೀನಾಮೆಯ ಮಾತುಗಳನ್ನಾಡಿದ್ದಾರೆ. ಬಹುತೇಕ ಮಂದಿ ರಾಜೀನಾಮೆಯಿಂದ ಹಿಂದೆ ಸರಿದಿರುವುದಾಗಿ ಹೇಳಿಕೊಂಡರೂ ಕಾಂಗ್ರೆಸ್ ಶಾಸಕರ ಪಾಳಯದಲ್ಲಿ ಅಸಮಾಧಾನ ಇನ್ನೂ ಹೊಗೆಯಾಡುತ್ತಿದೆ. ಇದೀಗ ಅವರನ್ನು ಸಮಾಧಾನಪಡಿಸಲು ಸಿಎಂ ಡಿಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಹಾಗೂ ಸಚಿವರು ಮನೆ ಮನೆಗೆ ತೆರಳಿ ಮಾತುಕತೆ ಮೂಲಕ ಮನವೊಲಿಸುವ ಯತ್ನ ನಡೆಸಿದ್ದಾರೆ.
ಈ ಬೆಳವಣಿಗೆಗಳ ನಡುವೆ ಜೆಡಿಎಸ್ ನಾಯಕರೂ ಆದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ನೀಡಿರುವ ಹೇಳಿಕೆ ಕುತೂಹಲಕ್ಕೆ ನಾಂದಿ ಹಾಡಿದೆ. ಕಾಂಗ್ರೆಸ್ ಅಸಮಧಾನಿತ ಶಾಸಕರಿಗೆ ಅವರು ಗಾಳ ಹಾಕಿದಂತಿದ್ದು, ಜೆಡಿಎಸ್ಗೆ ಬರುವಂತೆ ಓಪನ್ ಆಫರ್ ನೀಡಿದ್ದಾರೆ.

ಹಾಸನದ ಹರದನಹಳ್ಳಿಯಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಜೆಡಿಎಸ್ ಪಕ್ಷ ನೋವು ಮತ್ತು ಸಮಸ್ಯೆಯಲ್ಲಿರುವವರಿಗೆ ಪರಿಹಾರ ನೀಡುವ ಪಕ್ಷ ಎಂದು ಹೇಳಿದರು.
“ನೊಂದವರಿಗೆ, ನೋವಿನಲ್ಲಿರುವವರಿಗೆ ಜೆಡಿಎಸ್ ಪಕ್ಷದ ಬಾಗಿಲು ತೆರೆದಿರುತ್ತದೆ. ನೋವಿಗೆ ಪರಿಹಾರವೂ ಸಿಗುತ್ತದೆ” ಎಂದು ಹೇಳುವ ಮೂಲಕ ಅಸಮಾಧಾನಿತ ಕಾಂಗ್ರೆಸ್ ಶಾಸಕರಿಗೆ ಪರೋಕ್ಷವಾಗಿ ಆಹ್ವಾನ ನೀಡಿದರು.
ಸಚಿವ ಸಂಪುಟ ವಿಸ್ತರಣೆಯ ಬಳಿಕ ಕಾಂಗ್ರೆಸ್ನಲ್ಲಿ ಉಂಟಾಗಿರುವ ಅಸಮಾಧಾನವನ್ನು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ರಾಜಕೀಯವಾಗಿ ಬಳಸಿಕೊಳ್ಳುವ ಪ್ರಯತ್ನ ನಡೆಸುತ್ತಿರುವುದು ಈ ಹೇಳಿಕೆಯಿಂದ ಮತ್ತಷ್ಟು ಸ್ಪಷ್ಟವಾಗಿದೆ..
