
ಟೆಹ್ರಾನ್: ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾದ ಹೊರ್ಮುಜ್ ಜಲಸಂಧಿಯನ್ನು ಇರಾನ್ ತಾತ್ಕಾಲಿಕವಾಗಿ ಮುಚ್ಚುವುದಾಗಿ ಘೋಷಿಸಿದ ಬೆನ್ನಲ್ಲೇ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ. ಈ ಬೆಳವಣಿಗೆಗೆ ಪ್ರತಿಯಾಗಿ ಅಮೆರಿಕ ಇರಾನ್ನ ಪ್ರಮುಖ ಸೇನಾ ನೆಲೆಗಳ ಮೇಲೆ ವಾಯುದಾಳಿ ನಡೆಸಿದೆ.
ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಸೈಪ್ರಸ್ ಧ್ವಜದಡಿ ಸಂಚರಿಸುತ್ತಿದ್ದ ‘ಎಂವಿ ಜಿಎಫ್ಎಸ್ ಗ್ಯಾಲಕ್ಸಿ’ ಸರಕು ಹಡಗನ್ನು ತಡೆದು ದಾಳಿ ನಡೆಸಿದೆ ಎಂದು ಅಮೆರಿಕ ಆರೋಪಿಸಿದೆ. ಘಟನೆಯಲ್ಲಿ ಹಡಗಿನ ಎಂಜಿನ್ ವಿಭಾಗಕ್ಕೆ ಹಾನಿಯಾಗಿದ್ದು, ಒಬ್ಬ ಸಿಬ್ಬಂದಿ ನಾಪತ್ತೆಯಾಗಿದ್ದಾರೆ.
ಅಮೆರಿಕ ಮಧ್ಯಪ್ರವೇಶ ಮುಂದುವರಿದಿರುವವರೆಗೆ ಹೊರ್ಮುಜ್ ಜಲಸಂಧಿಯಲ್ಲಿ ಯಾವುದೇ ಹಡಗುಗಳ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಇರಾನ್ ಘೋಷಿಸಿದೆ. ಈ ಕ್ರಮದಿಂದ ಜಾಗತಿಕ ತೈಲ ಪೂರೈಕೆ ಮತ್ತು ಸಮುದ್ರ ವ್ಯಾಪಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಈ ವಾರ ಇರಾನ್ ವಿರುದ್ಧ ಮೂರನೇ ಹಂತದ ಕಾರ್ಯಾಚರಣೆ ನಡೆಸಿರುವುದಾಗಿ ತಿಳಿಸಿದ್ದು, ವಾಣಿಜ್ಯ ಹಡಗುಗಳ ಭದ್ರತೆಯನ್ನು ಖಚಿತಪಡಿಸಲು ಕ್ರಮ ಕೈಗೊಂಡಿರುವುದಾಗಿ ಹೇಳಿದೆ.
ಇದೇ ವೇಳೆ, ಕತಾರ್ ಮಧ್ಯಸ್ಥಿಕೆಯಲ್ಲಿ ಅಮೆರಿಕ–ಇರಾನ್ ನಡುವಿನ ರಾಜತಾಂತ್ರಿಕ ಮಾತುಕತೆ ಪುನರಾರಂಭಿಸಲು ಪ್ರಯತ್ನಗಳು ಮುಂದುವರಿದಿವೆ. ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ, ಕಳೆದ ಒಪ್ಪಂದದ ಎಲ್ಲ ಷರತ್ತುಗಳನ್ನು ಇರಾನ್ ಪಾಲಿಸಿದೆ ಎಂದು ಹೇಳಿದ್ದು, ಅಮೆರಿಕವೂ ತನ್ನ ಬದ್ಧತೆಗಳನ್ನು ಗೌರವಿಸಬೇಕು ಎಂದು ಒತ್ತಾಯಿಸಿದ್ದಾರೆ.
