
ನ್ಯೂಯಾರ್ಕ್: ಉದ್ಯಮಿ ಗೌತಮ್ ಅದಾನಿ, ಅವರ ಸೋದರಳಿಯ ಸಾಗರ್ ಅದಾನಿ ಹಾಗೂ ಮಾಜಿ ಉದ್ಯೋಗಿ ವಿನೀತ್ ಜೈನ್ ವಿರುದ್ಧ ಅಮೆರಿಕದಲ್ಲಿ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಫೆಡರಲ್ ನ್ಯಾಯಾಲಯ ವಜಾಗೊಳಿಸಿದೆ.
ನ್ಯೂಯಾರ್ಕ್ನ ಬ್ರೂಕ್ಲಿನ್ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ನಿಕೋಲಸ್ ಜಿ. ಗರೌಫಿಸ್ ಅವರು ಅಮೆರಿಕದ ನ್ಯಾಯಾಂಗ ಇಲಾಖೆಯ ಮನವಿ ಮೇರೆಗೆ ಪ್ರಕರಣವನ್ನು ‘ಡಿಸ್ಮಿಸ್ಡ್ ವಿತ್ ಪ್ರಿಜುಡಿಸ್’ ಎಂದು ವಜಾಗೊಳಿಸಿದ್ದಾರೆ. ಇದರೊಂದಿಗೆ ಇದೇ ಆರೋಪಗಳ ಆಧಾರದ ಮೇಲೆ ಪ್ರಕರಣವನ್ನು ಮತ್ತೆ ದಾಖಲಿಸಲು ಅವಕಾಶ ಇರುವುದಿಲ್ಲ.
2024ರ ನವೆಂಬರ್ನಲ್ಲಿ ಅಮೆರಿಕದ ಪ್ರಾಸಿಕ್ಯೂಟರ್ಗಳು ಅದಾನಿ ಮತ್ತು ಇತರರ ವಿರುದ್ಧ ಭಾರತದಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಸುಮಾರು 25 ಕೋಟಿ ಡಾಲರ್ ಲಂಚ ನೀಡುವ ಸಂಚು ರೂಪಿಸಿ ಸೌರ ವಿದ್ಯುತ್ ಯೋಜನೆಗಳ ಗುತ್ತಿಗೆ ಪಡೆಯಲು ಯತ್ನಿಸಿದ ಆರೋಪ ಹೊರಿಸಿದ್ದರು. ಅಮೆರಿಕದ ಮಾರುಕಟ್ಟೆಗಳಲ್ಲಿ 300 ಕೋಟಿ ಡಾಲರ್ಗೂ ಹೆಚ್ಚು ಹಣ ಸಂಗ್ರಹಿಸುವಾಗ ಹೂಡಿಕೆದಾರರನ್ನು ದಾರಿ ತಪ್ಪಿಸಿದ ಆರೋಪವೂ ಕೇಳಿಬಂದಿತ್ತು.

ಅದಾನಿ ಸಮೂಹ ಆರೋಪಗಳನ್ನು ತಳ್ಳಿಹಾಕಿ, ಕಾನೂನು ಮತ್ತು ನಿಯಮಗಳನ್ನು ಪಾಲಿಸಿರುವುದಾಗಿ ಹೇಳಿತ್ತು.
ಪ್ರಕರಣ ಮುಂದುವರಿಸುವುದು ನ್ಯಾಯದ ಹಿತಾಸಕ್ತಿಗೆ ಅನುಗುಣವಾಗಿಲ್ಲ ಎಂದು ಟ್ರಂಪ್ ಆಡಳಿತದ ನ್ಯಾಯಾಂಗ ಇಲಾಖೆ ವಾದಿಸಿತ್ತು. ಪ್ರಕರಣದ ಬಹುತೇಕ ಕೃತ್ಯಗಳು ಭಾರತದಲ್ಲಿ ನಡೆದಿರುವುದು, ಸಾಕ್ಷ್ಯಾಧಾರಗಳ ಸವಾಲುಗಳು ಹಾಗೂ ಭಾರತೀಯ ಅಧಿಕಾರಿಗಳ ತನಿಖೆ ಸೇರಿದಂತೆ ಹಲವು ಅಂಶಗಳನ್ನು ಸರ್ಕಾರ ಉಲ್ಲೇಖಿಸಿತ್ತು.
ಪ್ರಕರಣ ವಜಾಗೊಳಿಸುವ ನಿರ್ಧಾರಕ್ಕೂ ತಮ್ಮ ಹೂಡಿಕೆ ಭರವಸೆಗೂ ಯಾವುದೇ ಸಂಬಂಧವಿಲ್ಲ ಎಂದು ಗೌತಮ್ ಅದಾನಿ ಆಪ್ತ ಮೂಲಗಳು ತಿಳಿಸಿವೆ.
