
ತುಮಕೂರು: ಕರ್ನಾಟಕದಲ್ಲಿ 19 ಲಕ್ಷ ಬಾಂಗ್ಲಾದೇಶಿ ಪ್ರಜೆಗಳು ವಾಸಿಸುತ್ತಿದ್ದಾರೆ, ಬೆಂಗಳೂರಿನಲ್ಲೇ 4.5 ಲಕ್ಷ ಮಂದಿ ಇದ್ದಾರೆ ಎಂಬ ಆರೋಪವನ್ನು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಳ್ಳಿಹಾಕಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ಅಂಕಿ-ಅಂಶಗಳಿಗೆ ವಿಶ್ವಾಸಾರ್ಹ ದಾಖಲೆ ಮತ್ತು ಅಧಿಕೃತ ಮಾಹಿತಿಯ ಆಧಾರ ಇರಬೇಕು ಎಂದು ಹೇಳಿದರು.
“ಚುನಾವಣಾ ಆಯೋಗ ಎಸ್ಐಆರ್ ಪ್ರಕ್ರಿಯೆ ನಡೆಸುತ್ತಿದೆ. ಅದರ ಅಂಕಿ-ಅಂಶಗಳಿಂದ 19 ಲಕ್ಷ ಬಾಂಗ್ಲಾದೇಶಿ ಪ್ರಜೆಗಳು ಇರುವುದಾಗಿ ದೃಢಪಟ್ಟರೆ, ಅದಕ್ಕೆ ಅನುಗುಣವಾಗಿ ಕ್ರಮ ಕೈಗೊಳ್ಳುತ್ತೇವೆ. ಯಾವುದೇ ಆಧಾರವಿಲ್ಲದೆ ಅಂಕಿ-ಅಂಶಗಳನ್ನು ಹೇಳಲು ಸಾಧ್ಯವಿಲ್ಲ,” ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು.
ಬರ ಪರಿಹಾರ ವಿಚಾರದಲ್ಲೂ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, ರಾಜ್ಯ ಸರ್ಕಾರ ಸಲ್ಲಿಸಿರುವ ಮನವಿಗೆ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದರು.

“ವಿಸ್ತೃತ ವರದಿ ಸಲ್ಲಿಸಿದ ಬಳಿಕವೂ ಕೇಂದ್ರ ಸರ್ಕಾರ ಪರಿಹಾರ ನಿಧಿ ಬಿಡುಗಡೆ ಮಾಡದಿದ್ದರೆ ಪ್ರತಿಭಟನೆ ನಡೆಸುತ್ತೇವೆ. ಅಗತ್ಯವಿದ್ದರೆ ನ್ಯಾಯಾಲಯದ ಮೊರೆ ಹೋಗುತ್ತೇವೆ,” ಎಂದು ಹೇಳಿದರು.
ಕೇಂದ್ರದ ಮಾರ್ಗಸೂಚಿಗಳಂತೆ ರಾಜ್ಯದಲ್ಲಿ ಬರ ಪರಿಸ್ಥಿತಿಯ ಸಮಗ್ರ ಸಮೀಕ್ಷೆ ನಡೆಸಲಾಗುವುದು. ಸಮೀಕ್ಷೆ ಪೂರ್ಣಗೊಳಿಸಿ ಆಗಸ್ಟ್ ಅಂತ್ಯದೊಳಗೆ ಕೇಂದ್ರಕ್ಕೆ ವರದಿ ಸಲ್ಲಿಸಿ ಪರಿಹಾರಕ್ಕೆ ಮನವಿ ಮಾಡಲಾಗುವುದು ಎಂದು ಪರಮೇಶ್ವರ್ ತಿಳಿಸಿದರು.
