Thursday, June 25

ಜಪಾನ್‌ನಲ್ಲಿ 7.2 ತೀವ್ರತೆಯ ಭೂಕಂಪ; ಸರಣಿ ಅವಘಡಗಳ ಆತಂಕ

ಟೋಕಿಯೊ: ಈಶಾನ್ಯ ಜಪಾನ್‌ನಲ್ಲಿ ಗುರುವಾರ ಬೆಳಿಗ್ಗೆ 7.2 ತೀವ್ರತೆಯ ಭೂಕಂಪ ಸಂಭವಿಸಿದ್ದು, ಕನಿಷ್ಠ ನಾಲ್ವರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಭೂಕಂಪವು ಇವಾಟೆ ಪ್ರಾಂತ್ಯದ ಪೂರ್ವ ಕರಾವಳಿಯಲ್ಲಿ ಸುಮಾರು 40 ಕಿ.ಮೀ ಆಳದಲ್ಲಿ ಸಂಭವಿಸಿದೆ. ಆರಂಭದಲ್ಲಿ 6.9 ತೀವ್ರತೆ ಎಂದು ಅಂದಾಜಿಸಲಾಗಿದ್ದ ಭೂಕಂಪವನ್ನು ಬಳಿಕ 7.2ಕ್ಕೆ ಪರಿಷ್ಕರಿಸಲಾಗಿದೆ. ಅಮೋರಿ ಪ್ರಾಂತ್ಯದ ಹಶಿಕಾಮಿ ಮತ್ತು ಹಚಿನೋಹೆ ಪ್ರದೇಶಗಳಲ್ಲಿ ತೀವ್ರ ಕಂಪನ ಅನುಭವವಾಗಿದೆ.

ಹೊಕ್ಕೈಡೊ, ಅಕಿತಾ, ಫುಕುಶಿಮಾ, ಮಿಯಾಗಿ, ಯಮಗಾಟಾ ಸೇರಿದಂತೆ ಹಲವು ಪ್ರದೇಶಗಳಲ್ಲೂ ಭೂಕಂಪದ ಪರಿಣಾಮ ಕಂಡುಬಂದಿದೆ. ಆದರೆ ಯಾವುದೇ ಸುನಾಮಿ ಎಚ್ಚರಿಕೆ ನೀಡಲಾಗಿಲ್ಲ. ಮುಂದಿನ ದಿನಗಳಲ್ಲಿ ಇದೇ ರೀತಿಯ ಕಂಪನಗಳು ಸಂಭವಿಸುವ ಸಾಧ್ಯತೆ ಇರುವುದರಿಂದ ಜನರು ಎಚ್ಚರಿಕೆಯಿಂದಿರಲು ಅಧಿಕಾರಿಗಳು ಸೂಚಿಸಿದ್ದಾರೆ.

ಅಮೋರಿ, ಮಿಯಾಗಿ ಹಾಗೂ ಫುಕುಶಿಮಾ ಪ್ರದೇಶಗಳಲ್ಲಿರುವ ಪರಮಾಣು ವಿದ್ಯುತ್ ಸ್ಥಾವರಗಳಲ್ಲಿ ಯಾವುದೇ ಅಸಹಜತೆ ಕಂಡುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ವೇಳೆ, ವೆನೆಜುವೆಲಾದಲ್ಲೂ ಎರಡು ಪ್ರಬಲ ಭೂಕಂಪಗಳು ಸಂಭವಿಸಿವೆ. ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್‌ಜಿಎಸ್) ಪ್ರಕಾರ, ಮೊದಲಿಗೆ 7.1 ತೀವ್ರತೆಯ ಮತ್ತು ಒಂದು ನಿಮಿಷದ ಬಳಿಕ 7.5 ತೀವ್ರತೆಯ ಭೂಕಂಪ ದಾಖಲಾಗಿದೆ.

ರಾಜಧಾನಿ ಕ್ಯಾರಕಾಸ್ ಸಮೀಪದ ಮೊರೊನ್ ಪ್ರದೇಶದಲ್ಲಿ ಸಂಭವಿಸಿದ ಈ ಭೂಕಂಪಗಳಿಂದ ವ್ಯಾಪಕ ಹಾನಿ ಉಂಟಾಗಿದೆ. ಇದರ ಬೆನ್ನಲ್ಲೇ ವೆನೆಜುವೆಲಾದ ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.