
ನವದೆಹಲಿ: ದೇಶದಲ್ಲಿ ಸಹೋದರತ್ವ, ಸಾಮರಸ್ಯ ಮತ್ತು ಹಂಚಿಕೆಯ ಪರಂಪರೆಯ ಸಂದೇಶವನ್ನು ಸಾರುವ ಉದ್ದೇಶದಿಂದ ಆರ್‌ಎಸ್‌ಎಸ್‌ಗೆ ಸಂಯೋಜಿತವಾಗಿರುವ ಮುಸ್ಲಿಂ ರಾಷ್ಟ್ರೀಯ ಮಂಚ್ ಭಾನುವಾರ ರಾಜ್‌ಘಾಟ್‌ನಿಂದ ‘ಆವೋ ಜದೋನ್ ಸೆ ಜುದೇಯಿನ್’ (ಬೇರುಗಳೊಂದಿಗೆ ಸಂಪರ್ಕ ಸಾಧಿಸಿ) ಅಭಿಯಾನಕ್ಕೆ ಚಾಲನೆ ನೀಡಿದೆ.
‘ವಿಭಿನ್ನ ನಂಬಿಕೆಗಳು, ಒಂದು ತಾಯ್ನಾಡು, ಒಂದು ಭಾರತೀಯ ಗುರುತು’ ಎಂಬ ಘೋಷವಾಕ್ಯದೊಂದಿಗೆ ಆರಂಭವಾದ ಅಭಿಯಾನವನ್ನು ಆರ್‌ಎಸ್‌ಎಸ್ ರಾಷ್ಟ್ರೀಯ ಕಾರ್ಯಕಾರಿಣಿಯ ಹಿರಿಯ ಸದಸ್ಯ ಹಾಗೂ ಮುಸ್ಲಿಂ ರಾಷ್ಟ್ರೀಯ ಮಂಚ್‌ನ ಮುಖ್ಯ ಪೋಷಕ ಇಂದ್ರೇಶ್ ಕುಮಾರ್ ಮುನ್ನಡೆಸಿದರು. ದೇಶವನ್ನು ‘ದ್ವೇಷ ಮುಕ್ತ ಭಾರತ’ವನ್ನಾಗಿಸುವ ಗುರಿಯೊಂದಿಗೆ ಮುಂದಿನ ದಿನಗಳಲ್ಲಿ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಂಘಟನೆ ತಿಳಿಸಿದೆ.

ರಾಜ್‌ಘಾಟ್‌ನ ಗಾಂಧಿ ಸ್ಮೃತಿ ದರ್ಶನದಲ್ಲಿ ನಡೆದ ಸಮ್ಮೇಳನದಲ್ಲಿ ಸಾಮಾಜಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಕ್ಷೇತ್ರಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಸಾಮಾಜಿಕ ಅಂತರ, ಪರಸ್ಪರ ಅಪನಂಬಿಕೆ ಹಾಗೂ ದ್ವೇಷದ ಘಟನೆಗಳನ್ನು ಕಡಿಮೆ ಮಾಡಲು ರಾಜಕೀಯ ಚರ್ಚೆಯ ಜತೆಗೆ ಜನರ ನಡುವಿನ ನೇರ ಸಂವಾದ ಮತ್ತು ಸಾಮಾಜಿಕ ಸಂಬಂಧಗಳನ್ನು ಬಲಪಡಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಇಂದ್ರೇಶ್ ಕುಮಾರ್ ಮಾತನಾಡಿ, ವ್ಯಕ್ತಿಗಳ ಧರ್ಮ, ಪೂಜಾ ವಿಧಾನ ಮತ್ತು ನಂಬಿಕೆಗಳು ವಿಭಿನ್ನವಾಗಿರಬಹುದು. ಆದರೆ ಮಾತೃಭೂಮಿ, ರಾಷ್ಟ್ರೀಯ ಗುರುತು ಮತ್ತು ಹಂಚಿಕೆಯ ಪರಂಪರೆ ಭಾರತೀಯರನ್ನು ಪರಸ್ಪರ ಬೆಸೆಯುತ್ತದೆ ಎಂದರು. ಪ್ರತಿಯೊಬ್ಬರೂ ತಮ್ಮ ಕುಟುಂಬ, ಪೂರ್ವಜರು, ವಂಶಾವಳಿ ಹಾಗೂ ಸಾಮಾಜಿಕ-ಸಾಂಸ್ಕೃತಿಕ ಹಿನ್ನೆಲೆಯನ್ನು ತಿಳಿದುಕೊಳ್ಳಬೇಕು ಎಂದು ಕರೆ ನೀಡಿದರು.
ಬೇರುಗಳನ್ನು ತಿಳಿದುಕೊಳ್ಳುವುದು ಮತ್ತೊಂದು ಧರ್ಮ ಅಥವಾ ಸಮುದಾಯವನ್ನು ಕಡಿಮೆ ಮಾಡುವುದಲ್ಲ. ಬದಲಾಗಿ, ಸ್ವಂತ ಗುರುತನ್ನು ಅರ್ಥಮಾಡಿಕೊಂಡು ಇತರರ ನಂಬಿಕೆಗಳನ್ನು ಗೌರವಿಸುವುದಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ದ್ವೇಷದ ಬದಲಿಗೆ ಪ್ರೀತಿ, ಸಂವಾದ, ಶಾಂತಿ ಮತ್ತು ಸಹೋದರತ್ವವನ್ನು ಬಲಪಡಿಸುವ ಮೂಲಕ ಗಲಭೆ, ಅಸ್ಪೃಶ್ಯತೆ, ಮಾಲಿನ್ಯ, ಅನಕ್ಷರತೆ ಹಾಗೂ ನಿರುದ್ಯೋಗದಂತಹ ಸಮಸ್ಯೆಗಳನ್ನು ಎದುರಿಸಬೇಕು ಎಂದು ಅವರು ಹೇಳಿದರು.
‘ಬೇರುಗಳೊಂದಿಗೆ ಸಂಪರ್ಕ ಸಾಧಿಸಿ’ ಅಭಿಯಾನ ಧಾರ್ಮಿಕ ಮತಾಂತರಕ್ಕೆ ಸಂಬಂಧಿಸಿದ್ದಲ್ಲ. ಭಾರತದ ಹಂಚಿಕೆಯ ಪರಂಪರೆಯನ್ನು ಅರಿತು, ಪರಸ್ಪರ ನಂಬಿಕೆ ಮತ್ತು ಗೌರವವನ್ನು ಬೆಳೆಸುವುದೇ ಇದರ ಉದ್ದೇಶ ಎಂದು ಇಂದ್ರೇಶ್ ಕುಮಾರ್ ತಿಳಿಸಿದರು. ಅಲ್ಲದೆ, ‘ಹರ್ ಘರ್ ತಿರಂಗ’ ಅಭಿಯಾನದಲ್ಲಿ ಹೆಚ್ಚಿನ ಜನರು ಭಾಗವಹಿಸುವಂತೆ ಕರೆ ನೀಡಿದರು.
