
ಲಖನೌ: ಉತ್ತರ ಪ್ರದೇಶದಲ್ಲಿ ಭಾರೀ ಬಿರುಗಾಳಿ, ಮಳೆ ಮತ್ತು ಆಲಿಕಲ್ಲು ಮಳೆಯಿಂದ ಭಾರೀ ಅನಾಹುತ ಸಂಭವಿಸಿದ್ದು, ವಿವಿಧ ಜಿಲ್ಲೆಗಳಲ್ಲಿ ಸಂಭವಿಸಿದ ಗೋಡೆ ಕುಸಿತ, ಮರ ಬಿದ್ದು ಹಾಗೂ ಸಿಡಿಲು ಬಡಿದ ಘಟನೆಗಳಲ್ಲಿ 74ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.
ಪ್ರಯಾಗ್‌ರಾಜ್‌ನಲ್ಲಿ ಅತಿ ಹೆಚ್ಚು 17 ಮಂದಿ ಸಾವನ್ನಪ್ಪಿದ್ದು, ಭದೋಹಿಯಲ್ಲಿ 10, ಫತೇಪುರ್‌ನಲ್ಲಿ 8, ಉನ್ನಾವ್‌ನಲ್ಲಿ 7, ಬದಾಯೂನ್‌ನಲ್ಲಿ 6 ಮತ್ತು ಬರೇಲಿಯಲ್ಲಿ 4 ಮಂದಿ ಮೃತಪಟ್ಟಿದ್ದಾರೆ. ಉನ್ನಾವ್ ಜಿಲ್ಲೆಯ ದಹಿ ಪ್ರದೇಶದಲ್ಲಿ ಮರ ಬಿದ್ದು 70 ವರ್ಷದ ರೈತ ಸಾವನ್ನಪ್ಪಿದರೆ, ಅಸಿವಾನ್‌ನಲ್ಲಿ ಬಾಲಕನೊಬ್ಬ ಬಲಿಯಾಗಿದ್ದಾನೆ.
ಬುಧವಾರ ಮಧ್ಯಾಹ್ನ ಆರಂಭವಾದ ಮಳೆ-ಗಾಳಿ ಸಂಜೆ ವೇಳೆಗೆ ಭೀಕರ ಚಂಡಮಾರುತವಾಗಿ ಮಾರ್ಪಟ್ಟಿದ್ದು, ನೂರಾರು ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಅನೇಕ ಜಿಲ್ಲೆಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ.
ರಸ್ತೆಗಳಲ್ಲಿ ಮರಗಳು ಬಿದ್ದ ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಹಲವಾರು ಮನೆಗಳು ಮತ್ತು ವಾಹನಗಳಿಗೆ ಹಾನಿಯಾಗಿದೆ. ನೂರಾರು ಜನರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಕಚೇರಿ ಜಿಲ್ಲಾಧಿಕಾರಿಗಳಿಗೆ ಪರಿಹಾರ ಕಾರ್ಯಾಚರಣೆ ಚುರುಕುಗೊಳಿಸಿ, ಸಂತ್ರಸ್ತರಿಗೆ ತಕ್ಷಣ ನೆರವು ಒದಗಿಸಲು ಸೂಚನೆ ನೀಡಿದೆ.
