
ಬೆಂಗಳೂರು: ಶಾಲೆಗಳಲ್ಲಿ ವಸ್ತ್ರಸಂಹಿತೆ ಇರಬೇಕೇ ಬೇಡವೇ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ಪ್ರಶ್ನಿಸಿದ್ದಾರೆ.
ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಗುರುವಾರ ಶಾಸಕ ಯಶ್‍ಪಾಲ್ ಸುವರ್ಣ ಮತ್ತು ರಾಜ್ಯ ವಕ್ತಾರ ಡಾ. ನರೇಂದ್ರ ರಂಗಪ್ಪ ಸುದ್ದಿಗೋಷ್ಠಿ ನಡೆಸಿದ ಸಿ.ಟಿ.ರವಿ, ಹಿಜಾಬ್‍ಗೆ ಅನುಮತಿ ನೀಡಿ, ಜನಿವಾರ- ರುದ್ರಾಕ್ಷಿಯನ್ನೂ ಎಳೆದು ತಂದು, ಕೇಸರಿ ಶಾಲಿಗೆ ನಿಷೇಧ ಹೇರಿ ಒಂದು ಸುತ್ತೋಲೆಯನ್ನು ಸರಕಾರ ಹೊರಡಿಸಿದೆ ಎಂದರು. ಬಿಜೆಪಿ, ಹಿಜಾಬ್ ವಿರೋಧಿಯಲ್ಲ; ನಾವು ಹಿಜಾಬ್ ವಿರೋಧಿಸಿಲ್ಲ ಎಂದು ಇದೇವೇಳೆ ಸ್ಪಷ್ಟಪಡಿಸಿದರು.
ಯಾವಾಗಿನಿಂದ ಯೂನಿಫಾರಂ (ವಸ್ತ್ರಸಂಹಿತೆ) ಆರಂಭವಾಗಿದೆ? ಯಾವ ಉದ್ದೇಶಕ್ಕೆ ಅದು ಪ್ರಾರಂಭವಾಗಿದೆ? ಎಂದು ಕೇಳಿದ ಅವರು, ಅಕ್ಷರ ಮತ್ತು ಜ್ಞಾನ ಹೆಚ್ಚಿಸಬೇಕಾದ ಶಿಕ್ಷಣ ಸಚಿವರಿಗೆ ಅದರ ಉದ್ದೇಶದ ಬಗ್ಗೆಯೂ ಸ್ಪಷ್ಟತೆ ಇಲ್ಲ. ಅದರ ಇತಿಹಾಸದ ಅರಿವೂ ಇಲ್ಲ. ಕೇವಲ ಮತೀಯ ಓಲೈಕೆಯ ರಾಜನೀತಿಯ ಭಾಗವಾಗಿ ಶಾಲೆಗಳಲ್ಲಿ ಮತೀಯ ಭಾವನೆಗಳಿಗೆ ಜಾತ್ಯತೀತತೆಯ ಹೆಸರಿನಲ್ಲಿ ಅನುಮತಿ ಕೊಟ್ಟಿದ್ದಾರೆ ಎಂದರು. ಶಾಲೆಗಳಲ್ಲಿ ಎಲ್ಲ ಮಕ್ಕಳೂ ಸಮಾನರು. ಅವರು ಬೇರೆ ಬೇರೆ ಮತ, ಸಂಪ್ರದಾಯಗಳಿಗೆ ಸೇರಿದ್ದರೂ ಅವರೆಲ್ಲ ಸಮಾನವಾಗಿ ಗುರುತಿಸಿಕೊಳ್ಳಬೇಕೆಂಬ ಉದ್ದೇಶದಿಂದ ಶಾಲಾ, ಕಾಲೇಜುಗಳಲ್ಲಿ ಯೂನಿಫಾರಂ ಅಳವಡಿಸಲಾಗಿದೆ ಎಂದು ವಿವರಿಸಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಮಿಷನರಿಗಳು, ಮೈಸೂರು ಸಂಸ್ಥಾನದ ಕಾಲಘಟ್ಟದಲ್ಲೂ ಸ್ವಾತಂತ್ರ್ಯ ಪೂರ್ವದಲ್ಲೇ ನಮ್ಮಲ್ಲಿ ಯೂನಿಫಾರಂ ವ್ಯವಸ್ಥೆಯನ್ನು ಜಾರಿಗೆ ತಂದರು ಎಂದು ತಿಳಿಸಿದರು. ಯಾವುದೇ ಸಂದರ್ಭದಲ್ಲಿ ಯೂನಿಫಾರಂ ಒಳಗೆ ಹಿಜಾಬ್ ಪ್ರವೇಶ ಮಾಡಿರಲಿಲ್ಲ ಎಂದು ವಿಶ್ಲೇಷಿಸಿದರು. 1983ರಲ್ಲಿ ಕರ್ನಾಟಕ ಶಿಕ್ಷಣ ಕಾಯ್ದೆಯ ಮೂಲಕ ವಸ್ತ್ರಸಂಹಿತೆಯ ಉದ್ದೇಶವನ್ನು ಸ್ಪಷ್ಟಪಡಿಸಿದ್ದಾರೆ. ಆಯಾ ಶಾಲಾ, ಕಾಲೇಜಿನ ಆಡಳಿತ ಮಂಡಳಿಗೆ ಸ್ವಾಯತ್ತತೆ, ಜವಾಬ್ದಾರಿ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಸರಕಾರ ಇದೀಗ ಮತೀಯ ಓಲೈಕೆ ರಾಜಕಾರಣ ಮುಂದುವರೆಸಿದೆ. ಅದರ ಪರಿಣಾಮವಾಗಿ ಶಾಲೆಗಳಲ್ಲಿ ಹಿಜಾಬ್‍ಗೆ ಅನುಮತಿ ಕೊಟ್ಟಿದ್ದಾರೆ ಎಂದು ಆಕ್ಷೇಪಿಸಿದರು. ಭಾರತ ಎಂದರೆ ಒಂದು ಪುಸ್ತಕ, ಒಂದು ಪ್ರವಾದಿ, ಒಬ್ಬ ದೇವರು ಎಂಬ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟ ರಾಷ್ಟ್ರ ಅಲ್ಲ ಎಂದ ಅವರು, ಭಾರತವು ದೇವನೊಬ್ಬ ನಾಮ ಹಲವು ಎಂಬ ನಂಬಿಕೆಯ ದೇಶ. ಭಾರತವೆಂದರೆ ಸಾವಿರಾರು ಜನ ಮತ ಪ್ರವರ್ತಕರು, ಋಷಿಮುನಿಗಳ ದೇಶ. ಒಬ್ಬೊಬ್ಬರ ವಿಚಾರವು ಕೂಡ ಆಂತರಿಕವಾಗಿ ಏಕರೂಪತೆ ಹೊಂದಿದ್ದರೂ ಬಾಹ್ಯವಾಗಿ ಬಹುಮುಖವನ್ನು ಹೊಂದಿರುವ ವಿಚಾರಧಾರೆ ಎಂದು ವಿಶ್ಲೇಷಿಸಿದರು.
ಶಿಕ್ಷಣ ಸಚಿವರು ಮತ್ತು ಕಾಂಗ್ರೆಸ್ ಸರಕಾರವು ಎಲ್ಲರ ಸಂಪ್ರದಾಯವನ್ನು ಗೌರವಿಸುವರೇ ಎಂದು ಪ್ರಶ್ನಿಸಿದರು. ಎಲ್ಲ ಸಂಪ್ರದಾಯವನ್ನು ಗೌರವಿಸುತ್ತೇವೆ ಎಂಬುದು ನಿಮ್ಮ ಸುತ್ತೋಲೆಯಲ್ಲಿ ಇಲ್ಲ ಎಂದು ಗಮನ ಸೆಳೆದರು. ಎಲ್ಲ ಮತ ಸಂಪ್ರದಾಯವನ್ನು ನೀವು ಗೌರವಿಸುವುದಾದರೆ, ಭಾರತದಲ್ಲಿ ಸಾವಿರಾರು ಮತ ಸಂಪ್ರದಾಯಗಳಿವೆ. ನಿರ್ವಾಣ ಸ್ಥಿತಿ ಎಂದರೆ ಬಟ್ಟೆಯನ್ನೇ ಹಾಕದ ಸಂಪ್ರದಾಯದಿಂದ ಮೊದಲುಗೊಂಡು ಶರೀರದ ಯಾವೊಂದು ಅಂಗವೂ ಕಾಣದಂತೆ ಮುಚ್ಚಿಕೊಳ್ಳುವ ಸಂಪ್ರದಾಯವೂ ಈ ದೇಶದಲ್ಲಿದೆ ಎಂದು ವಿವರಿಸಿದರು.
ನಿಮ್ಮ ಹೇಳಿಕೆ ಪ್ರಕಾರ ಎಲ್ಲ ಮತ ಸಂಪ್ರದಾಯವನ್ನು ನೀವು ಗೌರವಿಸುವುದಾದರೆ, ಹಾಗೇ ಹೇಳಿ ಎಂದು ಒತ್ತಾಯಿಸಿದರು. ಕೇವಲ ಹಿಜಾಬ್‍ಗೆ ಅನುಮತಿ, ಕೇಸರಿ ಶಾಲಿಗೆ ಇಲ್ಲ ಎಂದಿದ್ದೀರಿ. ಇದರಿಂದ ನೀವು ಕೇಸರಿ ವಿರೋಧಿಗಳು ಅನಿಸುತ್ತದೆ ಎಂದು ತಿಳಿಸಿದರು. ನೀವು ಮರಿ ತಾಲಿಬಾನಿಗಳ ಥರ ವರ್ತನೆ ಮಾಡುತ್ತಿದ್ದೀರಿ ಎಂದು ಅನಿಸುತ್ತದೆ ಎಂದು ನುಡಿದರು.
ಎಲ್ಲ ಮತ ಸಂಪ್ರದಾಯಕ್ಕೆ ಆದ್ಯತೆ ನೀಡಿದರೆ ಅವರವರ ಮತ ಸಂಪ್ರದಾಯದಂತೆ ಅವರವರು ಬರುತ್ತಾರೆ. ಆಗ, ಎಲ್ಲ ಮಕ್ಕಳು ಶಾಲೆಗಳಲ್ಲಿ ಸಮಾನರಾಗಿ ಇರಬೇಕೆಂಬ ದೃಷ್ಟಿಯಿಂದ ವಸ್ತ್ರಸಂಹಿತೆ ರೂಪಿಸಿದವರ ಮಹತ್ವಾಕಾಂಕ್ಷೆ ಎಲ್ಲವೂ ಮಣ್ಣುಪಾಲಾಗುತ್ತದೆ. ಹಿಜಾಬ್ ಸಂಪ್ರದಾಯ ಅವರ ಮನೆಯಲ್ಲಿ ಇಟ್ಟುಕೊಳ್ಳಲಿ. ಎಲ್ಲೆಲ್ಲಿ ಅನುಮತಿ ಇದೆಯೋ ಅಲ್ಲಿ ಬಳಸಲಿ. ಶಾಲೆಗಳಲ್ಲಿ ಹಿಜಾಬ್ ಯೂನಿಫಾರಂನ ಭಾಗ ಆಗಿದ್ದರೆ ಹಿಜಾಬ್ ಹಾಕಿಕೊಂಡು ಬರಲಿ. ಹಿಜಾಬ್ ಯೂನಿಫಾರಂನ ಭಾಗ ಆಗದೇ ಇದ್ದಲ್ಲಿ ಹೇಗೆ? ಎಂದರು. ನಾಳೆ ಯಾವುದಾದರೂ ಶಾಲೆಯ ಆಡಳಿತ ಮಂಡಳಿಯು ಕೇಸರಿ ಶಾಲನ್ನು ಯೂನಿಫಾರಂನ ಭಾಗವಾಗಿ ಮಾಡಿದರೆ ನೀವು ಹೇಗೆ ನಿರಾಕರಿಸುತ್ತೀರಿ ಎಂದು ಕೇಳಿದರು.
ಕೇಸರಿ ಶಾಲು ನಿರಾಕರಿಸುವುದು ನಿಮ್ಮ ಜಾತ್ಯತೀತತೆಯೇ? ಹಾಗಿದ್ದರೆ ಎಲ್ಲ ಮತ ಸಂಪ್ರದಾಯಕ್ಕೆ ಗೌರವ ಕೊಟ್ಟಂತೆ ಹೇಗಾಗಲಿದೆ ಎಂದು ಪ್ರಶ್ನೆ ಹಾಕಿದರು. ಈ ಮೂಲಕ ನೀವು ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣದ ನೀತಿಯನ್ನು ಅನುಸರಿಸಿದ್ದೀರಿ ಎಂದು ಆಕ್ಷೇಪಿಸಿದರು. ಶಾಲೆಗಳಲ್ಲಿ 1983ರ ಕರ್ನಾಟಕ ಶಿಕ್ಷಣ ಕಾಯ್ದೆಗೆ ಅನುಗುಣವಾಗಿ ಯಾವ ಯೂನಿಫಾರಂ ಪದ್ಧತಿ ಜಾರಿಗೆ ತಂದಿದ್ದರೋ ಅದನ್ನೇ ಮುಂದುವರೆಸುವುದು ಸೂಕ್ತ ಎಂದರು. ಇಲ್ಲವಾದರೆ, ನೀವು ಶಾಲೆಗಳನ್ನು ಮತೀಯವಾಗಿ ವಿಭಜಿಸುವ ಕಾರ್ಯಕ್ಕೆ ಕೈ ಹಾಕುತ್ತೀರಿ ಎಂದು ತಿಳಿಸಿದರು.
