
ವಾಷಿಂಗ್ಟನ್: ನೊಬೆಲ್ ಶಾಂತಿ ಪ್ರಶಸ್ತಿ ಸಮಿತಿ ವಿರುದ್ಧ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಂತಾರಾಷ್ಟ್ರೀಯ ಸಂಘರ್ಷಗಳನ್ನು ಬಗೆಹರಿಸುವಲ್ಲಿ ತಮ್ಮ ಆಡಳಿತದ ಪಾತ್ರವನ್ನು ಗುರುತಿಸದಿರುವುದು ಅಮೆರಿಕಕ್ಕೆ ಮಾಡಿದ ಅಪಮಾನ ಎಂದು ಅವರು ಟೀಕಿಸಿದ್ದಾರೆ.
ಶುಕ್ರವಾರ ನ್ಯೂಯಾರ್ಕ್ನ ಸಿರಾಕ್ಯೂಸ್ನಲ್ಲಿ ನಡೆದ ರಿಪಬ್ಲಿಕನ್ ಪಕ್ಷದ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಟ್ರಂಪ್, ತಾವು ಎಂಟು ಸಂಘರ್ಷಗಳನ್ನು ಬಗೆಹರಿಸಲು ನೆರವಾಗಿದ್ದೇನೆ ಎಂದು ಪ್ರತಿಪಾದಿಸಿದರು. ಇಷ್ಟೊಂದು ಪ್ರಯತ್ನಗಳ ಹೊರತಾಗಿಯೂ ನೊಬೆಲ್ ಶಾಂತಿ ಪ್ರಶಸ್ತಿಗೆ ತಮ್ಮನ್ನು ಪರಿಗಣಿಸದಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.
“ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ನೊಬೆಲ್ ಶಾಂತಿ ಪ್ರಶಸ್ತಿ ಸಿಗಬೇಕಿತ್ತು. ಆದರೆ ಅದು ಸಿಗಲಿಲ್ಲ” ಎಂದು ಅವರು ತಮ್ಮ ಬೆಂಬಲಿಗರ ಮುಂದೆ ಹೇಳಿದರು. ಪ್ರಶಸ್ತಿಗೆ ತಮ್ಮನ್ನು ಪರಿಗಣಿಸದಿರುವ ಬೆಳವಣಿಗೆಯನ್ನು ಅವರು “ಅಳಿಸಲಾಗದ ಕಲೆ” ಎಂದು ಬಣ್ಣಿಸಿದರು.

ಅಂತಾರಾಷ್ಟ್ರೀಯ ವಿವಾದಗಳನ್ನು ಬಗೆಹರಿಸುವಲ್ಲಿ ತಮ್ಮ ಆಡಳಿತವು ಮಹತ್ವದ ಸಾಧನೆ ಮಾಡಿದೆ ಎಂದು ಹೇಳಿಕೊಂಡ ಟ್ರಂಪ್, ತಾವು ಬಗೆಹರಿಸಿದ್ದೇನೆ ಎನ್ನಲಾದ ಪ್ರತಿಯೊಂದು ಸಂಘರ್ಷವೂ ಪ್ರತ್ಯೇಕ ಶಾಂತಿ ಪ್ರಶಸ್ತಿಗೆ ಅರ್ಹವಾಗಿತ್ತು ಎಂದು ವಾದಿಸಿದರು. ಪ್ರಶಸ್ತಿ ನೀಡದಿರುವ ನಿರ್ಧಾರ ಮುಜುಗರದ ಸಂಗತಿ ಎಂದೂ ಅವರು ಅಭಿಪ್ರಾಯಪಟ್ಟರು.
ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಪಡೆಯುವುದನ್ನು ತಡೆಯಲು ಹಾಗೂ ವ್ಯಾಪಕ ಪ್ರಾದೇಶಿಕ ಯುದ್ಧವನ್ನು ತಪ್ಪಿಸಲು ತಾವು ಪ್ರಮುಖ ಪಾತ್ರ ವಹಿಸಿದ್ದಾಗಿ ಟ್ರಂಪ್ ಹೇಳಿಕೊಂಡರು. ರಷ್ಯಾ–ಉಕ್ರೇನ್ ಸಂಘರ್ಷ ಮತ್ತು ಇರಾನ್ಗೆ ಸಂಬಂಧಿಸಿದ ಬಿಕ್ಕಟ್ಟನ್ನು ಬಗೆಹರಿಸುವ ನಿಟ್ಟಿನಲ್ಲಿ ತಮ್ಮ ಆಡಳಿತ ಕಾರ್ಯನಿರ್ವಹಿಸುತ್ತಿದೆ ಎಂದರು.
