Wednesday, July 1

‘ಗೃಹಜ್ಯೋತಿ’ ಅಕ್ರಮ ಫಲಾನುಭವಿಗಳ ಪತ್ತೆಗೆ SIR ಮಾದರಿಯಲ್ಲಿ ಮನೆ-ಮನೆ ಪರಿಶೀಲನೆಗೆ ಚಾಲನೆ

ಬೆಂಗಳೂರು: ಚುನಾವಣಾ ಆಯೋಗ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (SIR) ನಡೆಸುತ್ತಿರುವ ನಡುವೆಯೇ, ರಾಜ್ಯ ಸರ್ಕಾರವೂ ತನ್ನ ಮಹತ್ವಾಕಾಂಕ್ಷೆಯ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಮನೆ-ಮನೆ ಪರಿಶೀಲನೆಗೆ ಮುಂದಾಗಿದೆ. ಯೋಜನೆಯ ಅಕ್ರಮ ಫಲಾನುಭವಿಗಳನ್ನು ಗುರುತಿಸಿ ಕೈಬಿಡುವ ಉದ್ದೇಶದಿಂದ ಎಸ್ಕಾಂ ಸಿಬ್ಬಂದಿ ಮನೆ-ಮನೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.

ಪರಿಶೀಲನೆ ವೇಳೆ ಮೊಬೈಲ್ ಆ್ಯಪ್ ಹಾಗೂ ಘೋಷಣಾ ಪತ್ರದ ಮೂಲಕ ಫಲಾನುಭವಿಗಳ ವಿವರಗಳನ್ನು ಸಂಗ್ರಹಿಸಲಾಗುತ್ತದೆ. ಈ ಸಂದರ್ಭದಲ್ಲಿ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ (ವೋಟರ್ ಐಡಿ), ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ರೇಷನ್ ಕಾರ್ಡ್, ಜಾತಿ ಪ್ರಮಾಣ ಪತ್ರ ಹಾಗೂ ಬಾಡಿಗೆ ಮನೆಯಲ್ಲಿ ವಾಸಿಸುವವರಾದರೆ ಬಾಡಿಗೆ ಒಪ್ಪಂದ ಪತ್ರ ಸೇರಿದಂತೆ ಅಗತ್ಯ ದಾಖಲೆಗಳನ್ನು ಪರಿಶೀಲನೆಗೆ ಸಿದ್ಧವಾಗಿಡುವಂತೆ ಬೆಸ್ಕಾಂ ಮನವಿ ಮಾಡಿದೆ.

ಮೀಟರ್ ರೀಡರ್‌ಗಳ ಮೂಲಕ ಸ್ಥಳದಲ್ಲೇ ಪರಿಶೀಲನೆ ನಡೆಸುವುದು ಈ ಪ್ರಕ್ರಿಯೆಯ ಪ್ರಮುಖ ಭಾಗವಾಗಿದ್ದು, ಗ್ರಾಹಕರು ಹಾಗೂ ಫಲಾನುಭವಿಗಳು ಸಂಪೂರ್ಣ ಸಹಕಾರ ನೀಡುವಂತೆ ಇಂಧನ ಇಲಾಖೆ ಕೋರಿದೆ.

ರಾಜ್ಯ ಸರ್ಕಾರದ ಗೃಹಜ್ಯೋತಿ ಯೋಜನೆಯಡಿ ಗೃಹ ಬಳಕೆದಾರರಿಗೆ ತಿಂಗಳಿಗೆ ಗರಿಷ್ಠ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಈ ಸೌಲಭ್ಯ ಕೇವಲ ಗೃಹ ಬಳಕೆದಾರರಿಗೆ ಮಾತ್ರ ಅನ್ವಯವಾಗುತ್ತದೆ. ವಾಣಿಜ್ಯ ಬಳಕೆಯ ವಿದ್ಯುತ್ ಸಂಪರ್ಕಗಳಿಗೆ ಈ ಯೋಜನೆ ಅನ್ವಯಿಸುವುದಿಲ್ಲ. ಯೋಜನೆಯ ಪ್ರಯೋಜನ ಪಡೆಯಲು ಫಲಾನುಭವಿಯು ಕರ್ನಾಟಕದ ನಿವಾಸಿಯಾಗಿರಬೇಕು. ಬಾಡಿಗೆ ಮನೆಯಲ್ಲಿ ವಾಸಿಸುವವರಿಗೂ ಯೋಜನೆಯ ಲಾಭ ದೊರೆಯಲಿದ್ದು, ಒಂದು ಆಧಾರ್ ಸಂಖ್ಯೆಗೆ ಒಂದೇ ವಿದ್ಯುತ್ ಮೀಟರ್‌ಗೆ ಮಾತ್ರ ರಿಯಾಯಿತಿ ನೀಡಲಾಗುತ್ತದೆ.