Sunday, May 10

ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣವಚನ

ಚೆನ್ನೈ: ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸರ್ಕಾರ ತಮಿಳುನಾಡಿನಲ್ಲಿ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿದೆ. ವಿಧಾನಸಭಾ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಟಿವಿಕೆ ಮುಖ್ಯಸ್ಥ ವಿಜಯ್ ಅವರು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಚೆನ್ನೈನ ಜವಾಹರಲಾಲ್ ನೆಹರು ಇಂಡೋರ್ ಸ್ಟೇಡಿಯಂ ನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ವಿಜಯ್ ಅವರಿಗೆ ಪ್ರಮಾಣವಚನ ಬೋಧಿಸಿದರು.

ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ಹಾಗೂ ‘ದಳಪತಿ’ ಎಂದೇ ಖ್ಯಾತರಾಗಿರುವ ವಿಜಯ್ ಇನ್ನು ಮುಂದೆ ತಮಿಳುನಾಡಿನ ಆಡಳಿತ ನಡೆಸಲಿದ್ದಾರೆ. ಇದೇ ವೇಳೆ ಹೊಸ ಸಚಿವ ಸಂಪುಟ ಸದಸ್ಯರಿಗೂ ರಾಜ್ಯಪಾಲರು ಪ್ರಮಾಣವಚನ ಬೋಧಿಸಿದರು.

ನೂತನ ಸಚಿವರಾಗಿ ಬಸ್ಸಿ ಎನ್ ಆನಂದ್, ಆದವ್ ಅರ್ಜುನ, ಕೆ.ಎ. ಸೆಂಗೊಟ್ಟಯ್ಯನ್, ಕೆ.ಜಿ. ಅರುಣ್‌ರಾಜ್, ಪಿ. ವೆಂಕಟರಮಣನ್, ಸಿ.ಟಿ.ಆರ್. ನಿರ್ಮಲ್ ಕುಮಾರ್, ಎ. ರಾಜ್‌ಮೋಹನ್, ಕೀರ್ತನಾ ಹಾಗೂ ಕೆ.ಟಿ. ಪ್ರಭು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

ಪ್ರಮಾಣವಚನ ಸಮಾರಂಭದಲ್ಲಿ ವಿವಿಧ ರಾಜಕೀಯ ನಾಯಕರು, ಚಿತ್ರರಂಗದ ಗಣ್ಯರು, ಉದ್ಯಮಿಗಳು ಹಾಗೂ ಸಾವಿರಾರು ಅಭಿಮಾನಿಗಳು ಭಾಗವಹಿಸಿದ್ದರು. ಸಮಾರಂಭದ ಬಳಿಕ ಚೆನ್ನೈ ನಗರದಲ್ಲಿ ಟಿವಿಕೆ ಕಾರ್ಯಕರ್ತರು ಭರ್ಜರಿ ಸಂಭ್ರಮಾಚರಣೆ ನಡೆಸಿದರು.