
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಬುಧವಾರ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಆತ್ಮಚರಿತ್ರೆ ‘ಟ್ರೈಯಂಫ್ ಆಫ್ ದಿ ಇಂಡಿಯನ್ ರಿಪಬ್ಲಿಕ್: ಮೈ ಲೈಫ್, ಮೈ ಸ್ಟ್ರಗಲ್ಸ್’ ಕೃತಿಯನ್ನು ಬಿಡುಗಡೆ ಮಾಡಿದರು. ಭಾರತದ ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ಇತಿಹಾಸವನ್ನು ಅರ್ಥಮಾಡಿಕೊಳ್ಳಲು ಈ ಪುಸ್ತಕ ಮಹತ್ವದ ಕೊಡುಗೆ ನೀಡಲಿದೆ ಎಂದು ಮೋದಿ ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ, ರಾಮನಾಥ್ ಕೋವಿಂದ್ ಅವರ ಜೀವನ ಪಯಣ, ಹೋರಾಟ ಹಾಗೂ ಸಾರ್ವಜನಿಕ ಸೇವೆ ಯುವ ಪೀಳಿಗೆಗೆ ಹಲವು ಪ್ರಮುಖ ಪಾಠಗಳನ್ನು ನೀಡುತ್ತದೆ ಎಂದರು. ಆತ್ಮಚರಿತ್ರೆ ಕೋವಿಂದ್ ಅವರ ವೈಯಕ್ತಿಕ ಜೀವನದ ಏಳು-ಬೀಳುಗಳ ಜತೆಗೆ ಭಾರತದ ಗಣರಾಜ್ಯ ಮತ್ತು ಪ್ರಜಾಪ್ರಭುತ್ವದ ಬೆಳವಣಿಗೆಯನ್ನೂ ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
ಕಾನ್ಪುರ ದೇಹಾತ್ನ ಸಾಮಾನ್ಯ ಕುಟುಂಬದಲ್ಲಿ ಬೆಳೆದ ಕೋವಿಂದ್ ಅವರು ಬಾಲ್ಯದಲ್ಲೇ ಹಲವು ಕಷ್ಟಗಳನ್ನು ಎದುರಿಸಿದ್ದರು. ಮನೆಗೆ ಬೆಂಕಿ ಬಿದ್ದ ಸಂದರ್ಭದಲ್ಲಿ ತಾಯಿಯನ್ನು ಕಳೆದುಕೊಂಡ ದುಃಖದ ಘಟನೆ ಅವರ ಜೀವನದಲ್ಲಿ ದೊಡ್ಡ ಆಘಾತವಾಗಿತ್ತು. ಇಂತಹ ಸಂಕಷ್ಟಗಳ ನಡುವೆಯೂ ಅವರು ಧೈರ್ಯ ಕಳೆದುಕೊಳ್ಳದೆ ಕುಟುಂಬ, ಸಮಾಜ ಹಾಗೂ ಶಿಕ್ಷಣದಿಂದ ಶಕ್ತಿ ಪಡೆದು ಮುನ್ನಡೆದರು ಎಂದು ಮೋದಿ ಸ್ಮರಿಸಿದರು.

ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆ ಅಲಂಕರಿಸಿದ ಬಳಿಕವೂ ಕೋವಿಂದ್ ಅವರ ಸರಳತೆ ಮತ್ತು ನಮ್ರತೆ ಬದಲಾಗಲಿಲ್ಲ ಎಂದು ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು. ಶಿಕ್ಷಕರು, ಗ್ರಾಮಸ್ಥರು ಸೇರಿದಂತೆ ತಮ್ಮನ್ನು ಬೆಳೆಸಿದವರ ಬಗ್ಗೆ ಅವರು ಹೊಂದಿರುವ ಗೌರವ ಭಾರತೀಯ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ ಎಂದರು.
ಬಡವರು ಮತ್ತು ಹಿಂದುಳಿದ ವರ್ಗದವರೂ ಪರಿಶ್ರಮ ಹಾಗೂ ಸಾಮರ್ಥ್ಯದ ಮೂಲಕ ದೇಶದ ಉನ್ನತ ಹುದ್ದೆ ತಲುಪಬಹುದಾದ ಭಾರತದ ಆಶಯವನ್ನು ಕೋವಿಂದ್ ಅವರ ಜೀವನ ಪ್ರತಿನಿಧಿಸುತ್ತದೆ ಎಂದು ಮೋದಿ ಹೇಳಿದರು.
ಯುವಜನರು ಶಾರ್ಟ್ಕಟ್ಗಳನ್ನು ತಪ್ಪಿಸಿ, ಆತ್ಮಚರಿತ್ರೆಗಳನ್ನು ಓದುವ ಮೂಲಕ ಇತಿಹಾಸ ಮತ್ತು ಸಾಧಕರ ಜೀವನದಿಂದ ಪಾಠ ಕಲಿಯಬೇಕು ಎಂದು ಪ್ರಧಾನಿ ಕರೆ ನೀಡಿದರು. ಕೋವಿಂದ್ ಅವರ ಹೋರಾಟ, ಪ್ರಾಮಾಣಿಕತೆ, ಸರಳತೆ ಮತ್ತು ಸಾರ್ವಜನಿಕ ಸೇವೆಯಿಂದ ಸ್ಫೂರ್ತಿ ಪಡೆಯುವಂತೆ ಸಲಹೆ ನೀಡಿದರು.
