Wednesday, July 22

ನೀಟ್-ಯುಜಿ ಮರುಪರೀಕ್ಷೆ: ಪ್ರಶ್ನೆಪತ್ರಿಕೆ ಸೋರಿಕೆ ವದಂತಿಗಳಿಗೆ ಎನ್‌ಟಿಎ ಸ್ಪಷ್ಟನೆ

ನವದೆಹಲಿ: ಜೂನ್ 21ರಂದು ನಡೆಯಲಿರುವ ನೀಟ್-ಯುಜಿ 2026 ಮರುಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ವದಂತಿಗಳನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ತಳ್ಳಿಹಾಕಿದ್ದು, ಇಂತಹ ಸುಳ್ಳು ಮಾಹಿತಿಗಳನ್ನು ನಂಬದಂತೆ ಅಭ್ಯರ್ಥಿಗಳು ಮತ್ತು ಪೋಷಕರಿಗೆ ಮನವಿ ಮಾಡಿದೆ.

ಸಾಮಾಜಿಕ ಜಾಲತಾಣಗಳು ಹಾಗೂ ಮೆಸೇಜಿಂಗ್ ವೇದಿಕೆಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ, ಮುಂಚಿತ ಪ್ರವೇಶ ಅಥವಾ ಮಾರಾಟಕ್ಕೆ ಸಂಬಂಧಿಸಿದಂತೆ ಹರಡುತ್ತಿರುವ ಎಲ್ಲಾ ಮಾಹಿತಿಗಳು ಸಂಪೂರ್ಣ ಸುಳ್ಳು ಮತ್ತು ದಾರಿತಪ್ಪಿಸುವಂತವು ಎಂದು ಎನ್‌ಟಿಎ ಸ್ಪಷ್ಟಪಡಿಸಿದೆ.

ವಿದ್ಯಾರ್ಥಿಗಳು ಮತ್ತು ಪೋಷಕರ ಆತಂಕವನ್ನು ದುರುಪಯೋಗಪಡಿಸಿಕೊಂಡು ಹಣ ವಸೂಲಿ ಮಾಡಲು ಕೆಲ ವಂಚಕ ಜಾಲಗಳು ಇಂತಹ ಸುಳ್ಳು ಸಂದೇಶಗಳನ್ನು ಹರಡುತ್ತಿವೆ ಎಂದು ಸಂಸ್ಥೆ ತಿಳಿಸಿದೆ.

ಪರೀಕ್ಷೆಯ ಸಮಗ್ರತೆ ಅಚಲವಾಗಿದ್ದು, ಎಲ್ಲ ಅಭ್ಯರ್ಥಿಗಳಿಗೆ ನ್ಯಾಯಯುತ ಹಾಗೂ ಸುರಕ್ಷಿತ ಪರೀಕ್ಷೆ ನಡೆಸಲು ಅಗತ್ಯವಿರುವ ಎಲ್ಲಾ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಎನ್‌ಟಿಎ ಹೇಳಿದೆ.

ಸುಳ್ಳು ಮಾಹಿತಿ ಹರಡುತ್ತಿರುವ ಸಾಮಾಜಿಕ ಜಾಲತಾಣ ಖಾತೆಗಳು, ಚಾನೆಲ್‌ಗಳು ಮತ್ತು ವಿಷಯಗಳನ್ನು ಗುರುತಿಸಿ ಸೈಬರ್ ಅಪರಾಧ ಅಧಿಕಾರಿಗಳಿಗೆ ವರದಿ ಮಾಡಲಾಗುತ್ತಿದೆ. ಕಾನೂನು ಜಾರಿ ಸಂಸ್ಥೆಗಳಿಗೆ ದೂರು ಸಲ್ಲಿಸಲಾಗಿದ್ದು, ನಕಲಿ ಪರೀಕ್ಷಾ ಮಾಹಿತಿಯನ್ನು ಸೃಷ್ಟಿಸುವುದು, ಹಂಚಿಕೊಳ್ಳುವುದು ಅಥವಾ ಪ್ರಸಾರ ಮಾಡುವುದು ಗಂಭೀರ ಅಪರಾಧವಾಗಿದೆ ಎಂದು ಎಚ್ಚರಿಕೆ ನೀಡಿದೆ.


ಅಭ್ಯರ್ಥಿಗಳು ಪರಿಶೀಲಿಸದ ಮಾಹಿತಿಯನ್ನು ನಂಬಬಾರದು, ಹಣ ಪಾವತಿಸಬಾರದು ಹಾಗೂ ಅಂತಹ ಸಂದೇಶಗಳನ್ನು ಹಂಚಿಕೊಳ್ಳಬಾರದು ಎಂದು ಸೂಚಿಸಲಾಗಿದೆ.

ಪರೀಕ್ಷೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಾಗಿ ಎನ್‌ಟಿಎಯ ಅಧಿಕೃತ ವೆಬ್‌ಸೈಟ್ ಮತ್ತು ಅಧಿಕೃತ ಸಂವಹನಗಳನ್ನೇ ಅವಲಂಬಿಸುವಂತೆ ಸಂಸ್ಥೆ ಮನವಿ ಮಾಡಿದೆ.

“ನಿಮ್ಮ ತಯಾರಿಯ ಮೇಲೆ ಗಮನಹರಿಸಿ. ನ್ಯಾಯಯುತ, ಸುರಕ್ಷಿತ ಮತ್ತು ವಿಶ್ವಾಸಾರ್ಹ ಪರೀಕ್ಷೆ ನಡೆಸಲು ಎನ್‌ಟಿಎ ಸಂಪೂರ್ಣ ಬದ್ಧವಾಗಿದೆ” ಎಂದು ಸಂಸ್ಥೆ ತಿಳಿಸಿದೆ.