
ಪ್ಯಾರಿಸ್: ವಿಶ್ವಪ್ರಸಿದ್ಧ ಐಫೆಲ್ ಟವರ್‌ನಲ್ಲಿ ಸಿಬ್ಬಂದಿ ನಡೆಸುತ್ತಿದ್ದ ದಿಢೀರ್ ಮುಷ್ಕರ ಅಂತ್ಯಗೊಂಡಿದೆ. ಮಹಿಳಾ ಉದ್ಯೋಗಿಗಳಿಗೆ ತಾರತಮ್ಯ ಎಸಗಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸೋಮವಾರ ಸಿಬ್ಬಂದಿ ಕೆಲಸ ಸ್ಥಗಿತಗೊಳಿಸಿದ್ದರು. ಇದೀಗ ಐಫೆಲ್ ಟವರ್ ನಿರ್ವಹಣಾ ಸಂಸ್ಥೆ (SETE) ಕ್ಷಮೆಯಾಚಿಸಿದ ಬಳಿಕ ಮಂಗಳವಾರದಿಂದ ಪ್ರವಾಸಿಗರಿಗೆ ಗೋಪುರವನ್ನು ಮತ್ತೆ ತೆರೆಯಲಾಗಿದೆ.
ಫ್ರಾನ್ಸ್‌ನಲ್ಲಿ ಹೊಸ ದೇವಾಲಯ ಉದ್ಘಾಟನೆಗೆ ಆಗಮಿಸಿದ್ದ ಬಿಎಪಿಎಸ್ ಸ್ವಾಮಿನಾರಾಯಣ ಸಂಸ್ಥೆಯ ಸುಮಾರು 100 ಸದಸ್ಯರ ನಿಯೋಗ ಐಫೆಲ್ ಟವರ್‌ಗೆ ಖಾಸಗಿ ಭೇಟಿಗೆ ತೆರಳಿತ್ತು. ಈ ವೇಳೆ ನಿಯೋಗದ ಮನವಿಯ ಮೇರೆಗೆ ಕರ್ತವ್ಯದಲ್ಲಿದ್ದ ಮಹಿಳಾ ಸಿಬ್ಬಂದಿಯನ್ನು ತಮ್ಮ ಸ್ಥಳದಿಂದ ದೂರ ಸರಿದು, ‘ಕಾಣಿಸದಂತೆ’ ಇರುವಂತೆ ಆಡಳಿತ ಸೂಚಿಸಿತ್ತು ಎಂದು ಕಾರ್ಮಿಕ ಸಂಘಟನೆಗಳು ಆರೋಪಿಸಿವೆ.

ಅಷ್ಟೇ ಅಲ್ಲದೆ, ಮಹಿಳಾ ಸಿಬ್ಬಂದಿ ಇದ್ದ ಸ್ಥಳದಲ್ಲಿ ಪುರುಷ ಉದ್ಯೋಗಿಗಳನ್ನು ನಿಯೋಜಿಸಲಾಗಿತ್ತು ಎನ್ನಲಾಗಿದೆ. ಇದನ್ನು ಮಹಿಳಾ ಉದ್ಯೋಗಿಗಳ ಅವಮಾನ ಮತ್ತು ಲಿಂಗ ತಾರತಮ್ಯ ಎಂದು ಖಂಡಿಸಿ ಸಿಬ್ಬಂದಿ ಮುಷ್ಕರಕ್ಕೆ ಇಳಿದಿದ್ದರು. ಇದರಿಂದ ಐಫೆಲ್ ಟವರ್‌ಗೆ ಆಗಮಿಸಿದ್ದ ನೂರಾರು ಪ್ರವಾಸಿಗರಿಗೆ ತೊಂದರೆಯಾಗಿತ್ತು.
ವಿವಾದ ತೀವ್ರಗೊಳ್ಳುತ್ತಿದ್ದಂತೆ SETE ಅಧ್ಯಕ್ಷ ಏರಿಯಲ್ ವೈಲ್ ಅವರು ಸಿಬ್ಬಂದಿಯ ಬಳಿ ಕ್ಷಮೆಯಾಚಿಸಿದ್ದಾರೆ. ಇಂತಹ ಷರತ್ತುಗಳನ್ನು ಒಪ್ಪಿಕೊಳ್ಳಬಾರದಿತ್ತು. ಇದು ಸಂಸ್ಥೆಯ ಮೂಲಭೂತ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಅವರು ಹೇಳಿದ್ದಾರೆ.
ಇತ್ತ ಬಿಎಪಿಎಸ್ ಪ್ಯಾರಿಸ್ ಘಟಕವೂ ಸ್ಪಷ್ಟನೆ ನೀಡಿದ್ದು, ತಮ್ಮ ಭೇಟಿಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೋರುವುದಾಗಿ ತಿಳಿಸಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಮುಂಜಾನೆ ಖಾಸಗಿ ಭೇಟಿ ಆಯೋಜಿಸಲಾಗಿತ್ತು. ಭೇಟಿಯ ಹಿಂದೆ ಯಾವುದೇ ತಾರತಮ್ಯದ ಉದ್ದೇಶ ಇರಲಿಲ್ಲ ಎಂದು ಸಂಸ್ಥೆ ಹೇಳಿದೆ.
ಘಟನೆ ಇದೀಗ ಫ್ರಾನ್ಸ್‌ನಲ್ಲೂ ಚರ್ಚೆಗೆ ಗ್ರಾಸವಾಗಿದ್ದು, ಸರ್ಕಾರವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಈ ಸಂಬಂಧ
ಆಂತರಿಕ ತನಿಖೆಗೆ ಆದೇಶಿಸಲಾಗಿದೆ.
