
ಬೆಂಗಳೂರು: ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಇದ್ದರೂ ವಿಶೇಷ ಅಧಿವೇಶನದಲ್ಲಿ ಮುಖ್ಯಮಂತ್ರಿ, ಸಚಿವರು ಹಾಗೂ ಶಾಸಕರು ಗಂಭೀರವಾಗಿ ಚರ್ಚೆ ನಡೆಸಿಲ್ಲ. ರೈತರ ಕುರಿತು ಹಗುರವಾಗಿ ಮಾತನಾಡಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಜನರ ಕ್ಷಮೆಯಾಚಿಸಬೇಕು ಎಂದು ಮಾಜಿ ಶಾಸಕ ಹಾಗೂ ಬಿಜೆಪಿ ರೈತ ಮೋರ್ಚಾ ರಾಜ್ಯ ಅಧ್ಯಕ್ಷ ಎ.ಎಸ್. ಪಾಟೀಲ್ ನಡಹಳ್ಳಿ ಅಗ್ರಹಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬರ ಪರಿಸ್ಥಿತಿ ಕುರಿತು ನಡೆದ ವಿಶೇಷ ಅಧಿವೇಶನ ಕೇವಲ ನಾಮಕಾವಸ್ತೆಗೆ ನಡೆದಂತಾಗಿದೆ ಎಂದು ಟೀಕಿಸಿದರು.
ಮುಂಗಾರು ಮಳೆ ಕೊರತೆಯಿಂದ ಬೆಳೆ ನಷ್ಟವಾಗಿದ್ದು, ಹಿಂಗಾರು ಮಳೆಯ ಬಗ್ಗೆಯೂ ಆತಂಕವಿದೆ. ಇಂತಹ ಸಂದರ್ಭದಲ್ಲಿ ರೈತರಿಗೆ ಅಗತ್ಯ ಸಲಹೆ, ಪರಿಹಾರ ಕ್ರಮ ಹಾಗೂ ಮುಂಜಾಗ್ರತಾ ಯೋಜನೆಗಳ ಕುರಿತು ಸರ್ಕಾರ ಸಮಗ್ರ ಚರ್ಚೆ ನಡೆಸಬೇಕಿತ್ತು. ಆದರೆ ಈ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದರು.
‘ಹೈಡ್ರೋಲಾಜಿಕಲ್ ಬರದ ಅರಿವಿಲ್ಲ’
ಆಳಂದ ಶಾಸಕ ಬಿ.ಆರ್. ಪಾಟೀಲ್ ಸೇರಿದಂತೆ ಕೆಲವೇ ಶಾಸಕರು ಮಾತ್ರ ಬರದ ಗಂಭೀರತೆ ಕುರಿತು ಮಾತನಾಡಿದ್ದಾರೆ. ಕರಾವಳಿ, ಮಲೆನಾಡು, ಮೈಸೂರು ಕರ್ನಾಟಕ, ಕಿತ್ತೂರು ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಬರದ ಪರಿಣಾಮ ವಿಭಿನ್ನವಾಗಿದ್ದು, ಆಯಾ ಭಾಗಗಳಿಗೆ ಅಗತ್ಯವಿರುವ ಕ್ರಮಗಳ ಬಗ್ಗೆ ಚರ್ಚೆಯಾಗಿಲ್ಲ ಎಂದು ನಡಹಳ್ಳಿ ಹೇಳಿದರು.

ಈ ಬಾರಿ ಎದುರಾಗಿರುವುದು ಕೇವಲ ಕೃಷಿಗೆ ಸೀಮಿತವಾದ ಬರವಲ್ಲ; ಜಲಮೂಲಗಳು ಮತ್ತು ಅಂತರ್ಜಲದ ಮೇಲೂ ಪರಿಣಾಮ ಬೀರಿರುವ ಹೈಡ್ರೋಲಾಜಿಕಲ್ ಬರ ಎಂದು ಅವರು ವಿವರಿಸಿದರು. ಕೆರೆಗಳು ಬತ್ತಿದ್ದು, ಅಂತರ್ಜಲ ಮಟ್ಟ ಕುಸಿದಿದೆ. ಜಾನುವಾರುಗಳಿಗೂ ನೀರಿನ ಸಮಸ್ಯೆ ಎದುರಾಗಿದೆ ಎಂದು ಹೇಳಿದರು.
‘ರೈತರ ನೋವಿಗೆ ಸ್ಪಂದಿಸಲಿಲ್ಲ’
ರೈತರಿಗೆ ₹2,500 ಇನ್ಪುಟ್ ಸಬ್ಸಿಡಿ ಘೋಷಿಸಿರುವ ಸರ್ಕಾರದ ಕ್ರಮದ ಕುರಿತು ಪ್ರತಿಕ್ರಿಯಿಸಿದ ನಡಹಳ್ಳಿ, ರೈತರ ಸಂಕಷ್ಟಕ್ಕೆ ಇದು ಸಮರ್ಪಕ ಪರಿಹಾರವಲ್ಲ ಎಂದು ಅಭಿಪ್ರಾಯಪಟ್ಟರು. ವಿಶೇಷ ಅಧಿವೇಶನದ ವೇಳೆ ಸರ್ಕಾರ ₹2,500 ನೆರವು ಘೋಷಿಸಿದ್ದು, ಮೊದಲ ಹಂತದಲ್ಲಿ ಸುಮಾರು 45ರಿಂದ 50 ಲಕ್ಷ ರೈತರಿಗೆ ₹1,250 ಕೋಟಿ ವೆಚ್ಚದಲ್ಲಿ ನೆರವು ನೀಡುವುದಾಗಿ ತಿಳಿಸಿತ್ತು.
ರೈತರಿಗೆ ಸರ್ಕಾರದ ವತಿಯಿಂದ ನೀಡಲಾಗುತ್ತಿರುವ ಸೌಲಭ್ಯಗಳ ಕುರಿತು ಮಾತನಾಡುವಾಗ ಅವರ ನೋವು ಮತ್ತು ಸಂಕಷ್ಟವನ್ನು ಅರ್ಥಮಾಡಿಕೊಂಡು ಮಾತನಾಡಬೇಕಿತ್ತು. ರೈತರು ಉತ್ಪಾದಿಸುವ ಆಹಾರವನ್ನೇ ಇಡೀ ಸಮಾಜ ಅವಲಂಬಿಸಿದೆ ಎಂಬುದನ್ನು ಮರೆಯಬಾರದು ಎಂದು ಹೇಳಿದರು.
‘ರೈತರ ಸ್ವಾಭಿಮಾನಕ್ಕೆ ಧಕ್ಕೆ’
ಮುಖ್ಯಮಂತ್ರಿಗಳ ಭಾಷಣದಲ್ಲಿ ರೈತರ ಸಂಕಷ್ಟಕ್ಕೆ ಸ್ಪಂದಿಸುವ ಭರವಸೆ ಕಾಣಿಸಲಿಲ್ಲ ಎಂದು ನಡಹಳ್ಳಿ ಆರೋಪಿಸಿದರು. ರಾಜ್ಯದ ಕೋಟ್ಯಂತರ ಜನ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಸರ್ಕಾರ ರೈತರಲ್ಲಿ ಆತ್ಮವಿಶ್ವಾಸ ತುಂಬಬೇಕಿತ್ತು. ಸಾಲದ ಒತ್ತಡದಲ್ಲಿರುವ ರೈತರ ರಕ್ಷಣೆಗೆ ಕ್ರಮ ಕೈಗೊಳ್ಳಬೇಕಿತ್ತು ಎಂದರು.
ಬೆಂಗಳೂರು ಅಭಿವೃದ್ಧಿಯ ಕುರಿತ ಚರ್ಚೆಯ ಜತೆಗೆ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಇತರ ಭಾಗಗಳ ಸಮಸ್ಯೆಗಳಿಗೂ ಸಮಾನ ಆದ್ಯತೆ ನೀಡಬೇಕು. ಬೆಂಗಳೂರು ಕರ್ನಾಟಕದ ಎಲ್ಲ ಜನರಿಗೂ ಸೇರಿದ್ದು, ಪ್ರಾದೇಶಿಕ ಅಸಮಾನತೆ ನಿವಾರಣೆಗೆ ಸರ್ಕಾರ ಗಮನಹರಿಸಬೇಕು ಎಂದು ಹೇಳಿದರು.
‘ಮಲತಾಯಿ ಧೋರಣೆ ಬೇಡ’
ನೀರಾವರಿ ಯೋಜನೆಗಳು ವಿಳಂಬವಾಗುತ್ತಿವೆ ಎಂದು ಆರೋಪಿಸಿದ ನಡಹಳ್ಳಿ, ಕೃಷ್ಣಾ ಮತ್ತು ಭೀಮಾ ನದಿ ನೀರಿನ ಬಳಕೆ ಸೇರಿದಂತೆ ಉತ್ತರ ಕರ್ನಾಟಕದ ನೀರಾವರಿ ಸಮಸ್ಯೆಗಳಿಗೆ ಸರ್ಕಾರ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಒತ್ತಾಯಿಸಿದರು.
ಭೂಸ್ವಾಧೀನ, ನ್ಯಾಯಾಲಯದ ವ್ಯಾಜ್ಯ ಸೇರಿದಂತೆ ವಿವಿಧ ಕಾರಣಗಳನ್ನು ಮುಂದಿಟ್ಟು ಯೋಜನೆಗಳನ್ನು ವಿಳಂಬ ಮಾಡಬಾರದು. ಉತ್ತರ ಕರ್ನಾಟಕದ ಬಗ್ಗೆ ಸರ್ಕಾರ ಮಲತಾಯಿ ಧೋರಣೆ ತಾಳಬಾರದು. ಕನಿಷ್ಠ ಮಾತಿನ ಮೂಲಕವಾದರೂ ರೈತರಿಗೆ ಭರವಸೆ ನೀಡಬೇಕಿತ್ತು ಎಂದು ಹೇಳಿದರು.
‘ಕೇಂದ್ರದತ್ತ ಬೊಟ್ಟು ತೋರಿಸುವುದು ಸರಿಯಲ್ಲ’
ರೈತರ ನೆರವಿನ ವಿಚಾರದಲ್ಲಿ ಪದೇಪದೇ ಕೇಂದ್ರ ಸರ್ಕಾರದತ್ತ ಬೊಟ್ಟು ತೋರಿಸುವ ಬದಲು ರಾಜ್ಯ ಸರ್ಕಾರವೂ ತನ್ನ ಸಂಪನ್ಮೂಲಗಳಿಂದ ಹೆಚ್ಚಿನ ನೆರವು ನೀಡಬೇಕು ಎಂದು ನಡಹಳ್ಳಿ ಹೇಳಿದರು.
ಬಜೆಟ್ನ ಕಂದಾಯ ವೆಚ್ಚದಲ್ಲಿ ರೈತರಿಗಾಗಿ ಹೆಚ್ಚಿನ ಅನುದಾನ ಮೀಸಲಿಡುವ ನಿರ್ಧಾರವನ್ನು ವಿಶೇಷ ಅಧಿವೇಶನದಲ್ಲೇ ಕೈಗೊಳ್ಳಬಹುದಿತ್ತು. ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ನೀಡುವ ಕುರಿತು ಸರ್ಕಾರ ಕ್ರಮ ಕೈಗೊಳ್ಳಬೇಕಿತ್ತು ಎಂದು ಆಗ್ರಹಿಸಿದರು.
ಕೇಂದ್ರದ ಕಿಸಾನ್ ಸಮ್ಮಾನ್ ಸೇರಿದಂತೆ ರೈತರಿಗೆ ದೊರೆಯುತ್ತಿರುವ ನೆರವು ಹಾಗೂ ಹಿಂದಿನ ಸರ್ಕಾರಗಳು ಪ್ರವಾಹ, ಬರ ಸಂದರ್ಭದಲ್ಲಿ ಕೈಗೊಂಡ ಪರಿಹಾರ ಕ್ರಮಗಳನ್ನು ಉಲ್ಲೇಖಿಸಿದ ಅವರು, ರಾಜ್ಯ ಸರ್ಕಾರವೂ ರೈತರ ಸಂಕಷ್ಟಕ್ಕೆ ಸ್ಪಂದಿಸುವ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದರು.
ರೈತರ ಕುರಿತು ಹಗುರವಾಗಿ ಮಾತನಾಡಿರುವ ಮುಖ್ಯಮಂತ್ರಿ ರಾಜ್ಯದ ಜನರ ಕ್ಷಮೆಯಾಚಿಸಬೇಕು. ಬರ ಪರಿಸ್ಥಿತಿಯನ್ನು ರಾಜಕೀಯವಾಗಿ ನೋಡದೆ ರೈತರ ಸಂಕಷ್ಟಕ್ಕೆ ತಕ್ಷಣ ಸ್ಪಂದಿಸಬೇಕು ಎಂದು ನಡಹಳ್ಳಿ ಒತ್ತಾಯಿಸಿದರು.
ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಸಿ. ಕಲ್ಮರುಡಪ್ಪ, ರಾಜ್ಯ ಉಪಾಧ್ಯಕ್ಷರಾದ ಭಾರತಿ ಮಲ್ಲಿಕಾರ್ಜುನ, ಗುರುಲಿಂಗನಗೌಡ ಹಾಗೂ ರಾಜ್ಯ ಕಾರ್ಯದರ್ಶಿ ಆರ್. ರಾಜೇಶ್ ಉಪಸ್ಥಿತರಿದ್ದರು.
