Tuesday, September 1

ಭಾರತದ ಸಂವಹನ ಜಾಲಕ್ಕೆ ಕ್ವಾಂಟಮ್ ಕವಚ; 14 ಸ್ವದೇಶಿ ಭದ್ರತಾ ಉತ್ಪನ್ನ ಅನಾವರಣ

ನವದೆಹಲಿ: ಕ್ವಾಂಟಮ್ ಕಂಪ್ಯೂಟಿಂಗ್ ಯುಗದಲ್ಲಿ ಎದುರಾಗಬಹುದಾದ ಸೈಬರ್‌ ಬೆದರಿಕೆಗಳಿಂದ ಭಾರತದ ಸಂವಹನ ಜಾಲಗಳನ್ನು ರಕ್ಷಿಸುವ ನಿಟ್ಟಿನಲ್ಲಿ ದೂರಸಂಪರ್ಕ ಇಲಾಖೆಯ (DoT) ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗವಾದ ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಟೆಲಿಮ್ಯಾಟಿಕ್ಸ್ (C-DOT) 14 ಸ್ವದೇಶಿ ಕ್ವಾಂಟಮ್ ಭದ್ರತಾ ಉತ್ಪನ್ನಗಳನ್ನು ಅನಾವರಣಗೊಳಿಸಿದೆ.

ನವದೆಹಲಿಯಲ್ಲಿ ನಡೆದ C-DOTನ 43ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಈ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಯಿತು. ಟೆಲಿಕಾಂ, ಎಂಟರ್‌ಪ್ರೈಸ್‌, ಆಪ್ಟಿಕಲ್‌, ವೈರ್‌ಲೆಸ್‌, ಕಾರ್ಯತಂತ್ರ ಮತ್ತು ರಕ್ಷಣಾ ಕ್ಷೇತ್ರಗಳಿಗಾಗಿ ಕ್ವಾಂಟಮ್ ಕೀ ಡಿಸ್ಟ್ರಿಬ್ಯೂಷನ್ (QKD) ಹಾಗೂ ಪೋಸ್ಟ್‌-ಕ್ವಾಂಟಮ್ ಕ್ರಿಪ್ಟೋಗ್ರಫಿ (PQC) ತಂತ್ರಜ್ಞಾನಗಳನ್ನು ಉತ್ಪನ್ನಗಳು ಒಳಗೊಂಡಿವೆ.

200 Gbps ವರೆಗೆ ಕ್ವಾಂಟಮ್ ಸುರಕ್ಷಿತ ಎನ್‌ಕ್ರಿಪ್ಶನ್

ಹೊಸ ಉತ್ಪನ್ನಗಳಲ್ಲಿ ಫೈಬರ್‌ ಆಧಾರಿತ QKD ವ್ಯವಸ್ಥೆಗಳಾದ Q-AKSHAY CD ಮತ್ತು Q-AKSHAY MD ಪ್ರಮುಖವಾಗಿವೆ. ಮಾಪನ ಸಾಧನಗಳಿಗೆ ಸಂಬಂಧಿಸಿದ ದುರ್ಬಲತೆಗಳಿಂದ ಹೆಚ್ಚುವರಿ ರಕ್ಷಣೆ ನೀಡುವ ಉದ್ದೇಶವನ್ನು ಇವು ಹೊಂದಿವೆ. ಸಿಂಗಲ್‌-ಫೋಟಾನ್‌ ಡಿಟೆಕ್ಟರ್ C-SPD ಹಾಗೂ ವೈಡ್‌ಬ್ಯಾಂಡ್‌ RF ಡ್ರೈವರ್ C-RD ಸೇರಿದಂತೆ ಪ್ರಮುಖ ಕ್ವಾಂಟಮ್‌ ಸಂವಹನ ಘಟಕಗಳನ್ನೂ ಅನಾವರಣಗೊಳಿಸಲಾಗಿದೆ.

Q-SETU 80 Mbps ವರೆಗೆ ಲೇಯರ್‌-3 ಸಂವಹನಕ್ಕೆ ಬೆಂಬಲ ನೀಡಿದರೆ, Q-MAHASETU 40 Gbps ವರೆಗೆ ಲೇಯರ್‌-2/3 ನೆಟ್‌ವರ್ಕ್‌ಗಳಿಗೆ ಕ್ವಾಂಟಮ್‌ ಸುರಕ್ಷತೆ ಒದಗಿಸುತ್ತದೆ. ಕಾರ್ಯತಂತ್ರ ಮತ್ತು ರಕ್ಷಣಾ ಬಳಕೆಗೆ Q-VIKRAM ಹಾಗೂ Q-PARAKRAM 1 Gbps ವರೆಗೆ ಕ್ವಾಂಟಮ್‌ ಸುರಕ್ಷಿತ ಎನ್‌ಕ್ರಿಪ್ಶನ್ ನೀಡುತ್ತವೆ. Q-AMOGH ಲೇಯರ್‌-1ರಲ್ಲಿ 200 Gbps ವರೆಗೆ ಹೆಚ್ಚಿನ ವೇಗದ ಆಪ್ಟಿಕಲ್‌ ಎನ್‌ಕ್ರಿಪ್ಶನ್‌ ಒದಗಿಸುತ್ತದೆ.

ಇದಲ್ಲದೆ, ಕ್ವಾಂಟಮ್‌ ಸುರಕ್ಷಿತ ವೀಡಿಯೊ IP ಫೋನ್ Q-DARSHAN, ಅಸ್ತಿತ್ವದಲ್ಲಿರುವ IP ಫೋನ್‌ಗಳನ್ನು ಕ್ವಾಂಟಮ್‌ ಭದ್ರತೆಗೆ ಅಪ್‌ಗ್ರೇಡ್‌ ಮಾಡುವ Q-VACHAN, ಎಂಟರ್‌ಪ್ರೈಸ್‌ ನೆಟ್‌ವರ್ಕ್‌ಗಳಿಗಾಗಿ Q-RAQSHAK ಹಾಗೂ ಸುರಕ್ಷಿತ ವೈರ್‌ಲೆಸ್‌ ಸಂವಹನಕ್ಕಾಗಿ Q-VAAYU ಮತ್ತು Q-VAJRA1000 ಪರಿಹಾರಗಳನ್ನೂ ಪರಿಚಯಿಸಲಾಗಿದೆ.

ಭವಿಷ್ಯದ ಕ್ವಾಂಟಮ್‌ ಕಂಪ್ಯೂಟರ್‌ಗಳಿಂದ ಎದುರಾಗಬಹುದಾದ ಬೆದರಿಕೆಗಳನ್ನು ಎದುರಿಸಲು ಉತ್ಪನ್ನಗಳಲ್ಲಿ NISTನ ಪೋಸ್ಟ್‌-ಕ್ವಾಂಟಮ್‌ ಕ್ರಿಪ್ಟೋಗ್ರಫಿ ಅಲ್ಗಾರಿದಮ್‌ಗಳನ್ನು ಬಳಸಲಾಗಿದೆ. ಭಾರತದ ಸಂವಹನ ಮೂಲಸೌಕರ್ಯಕ್ಕೆ ಸುರಕ್ಷಿತ, ಸ್ಥಿತಿಸ್ಥಾಪಕ ಮತ್ತು ಭವಿಷ್ಯಕ್ಕೆ ಸಿದ್ಧವಾಗಿರುವ ಸ್ವದೇಶಿ ಭದ್ರತಾ ತಂತ್ರಜ್ಞಾನಗಳನ್ನು ಒದಗಿಸುವ ಪ್ರಯತ್ನದ ಭಾಗವಾಗಿ ಈ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು C-DOT ತಿಳಿಸಿದೆ.