Thursday, April 30

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಆರೋಪಿಗೆ ಶಿಕ್ಷೆ; ಕಾಂಗ್ರೆಸ್ ನಾಯಕರ ಹಳೆಯ ಟೀಕೆಗೆ ಬಿಜೆಪಿ ತರಾಟೆ

ಬೆಂಗಳೂರು: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಶಾರೀಕ್‌ ಗೆ ನ್ಯಾಯಾಲಯ ಕಠಿಣ ಶಿಕ್ಷೆಯ ತೀರ್ಪು ಪ್ರಕಟಿಸಿದೆ. NIA ನ್ಯಾಯಾಲಯ ಆತನಿಗೆ 10 ವರ್ಷಗಳ ಕಠಿಣ ಶಿಕ್ಷೆಯ ತೀರ್ಪನ್ನು ಸೋಮವಾರ ಪ್ರಕಟಿಸಿದೆ.

ಈ ತೀರ್ಪನ್ನು ಸ್ವಾಗತಿಸಿರುವ ಕರ್ನಾಟಕ ಪ್ರದೇಶ ಬಿಜೆಪಿ, ಆಡಳಿತಾರೂಢ ಕಾಂಗ್ರೆಸ್ ನಾಯಕರ ಪ್ರತಿಕ್ರಿಯೆಗಳ ಬಗ್ಗೆ ವ್ಯಂಗ್ಯವಾಡಿದೆ. ‘ಅಂದು ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟವನ್ನು ಕೇವಲ ‘ಡೈವರ್ಶನ್ ಪಾಲಿಟಿಕ್ಸ್’ ಎಂದು ಲೇವಡಿ ಮಾಡಿ ಉಗ್ರರ ಪರ ನಿಂತಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್ ನಾಯಕರಿಗೆ ಈಗ ಸತ್ಯದ ದರ್ಶನವಾಗಿದೆ ಎಂದು ಬಿಜೆಪಿ ಪ್ರತಿಕ್ರಿಯಿಸಿದೆ.

ಈ ಕುರಿತಂತೆ ಸಾಮಾಜಿಕ ಮಾಧ್ಯಮ ‘X’ ನಲ್ಲಿ ಪೋಸ್ಟ್ ಹಾಕಿರುವ ಬಿಜೆಪಿ, ‘ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಉಗ್ರ ಶಾರೀಕ್‌ನ ಕೃತ್ಯ ಸಾಬೀತಾಗಿದ್ದು, NIA ನ್ಯಾಯಾಲಯ ಆತನಿಗೆ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ. ರಾಷ್ಟ್ರೀಯ ಭದ್ರತೆಯಂತಹ ಗಂಭೀರ ವಿಚಾರದಲ್ಲೂ ಕೇವಲ ತುಷ್ಟೀಕರಣ ಮತ್ತು ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್ ಪಕ್ಷದ ನೈಜ ಮುಖವಾಡ ಕಳಚಿದೆ’ ಎಂದು ಬರೆದುಕೊಂಡಿದೆ.

ದೇಶದ ಭದ್ರತೆಗಿಂತ ಕಾಂಗ್ರೆಸ್‌ಗೆ ವೋಟ್ ಬ್ಯಾಂಕ್ ರಾಜಕಾರಣವೇ ಮುಖ್ಯವಾಗಿದೆ. ಕಾಂಗ್ರೆಸ್‌ ಇನ್ನಾದರೂ ಮತಾಂಧರನ್ನು ತಮ್ಮ ಬ್ರದರ್ಸ್‌ ಎಂದು ಸಮರ್ಥನೆ ಮಾಡಿಕೊಳ್ಳುವುದನ್ನು ಬಿಡಬೇಕಿದೆ ಎಂದು ಬಿಜೆಪಿ ಪ್ರತಿಪಾದಿಸಿದೆ.