
ನವದೆಹಲಿ: ಜುಲೈ 1ರಂದು ಡಿಜಿಟಲ್ ಇಂಡಿಯಾ ಕಾರ್ಯಕ್ರಮ 11 ವರ್ಷಗಳನ್ನು ಪೂರೈಸಲಿದ್ದು, ಡಿಜಿಟಲ್ ಮೂಲಸೌಕರ್ಯ, ಕೃತಕ ಬುದ್ಧಿಮತ್ತೆ (AI), ಸೆಮಿಕಂಡಕ್ಟರ್ ಉತ್ಪಾದನೆ ಮತ್ತು ನಾವೀನ್ಯತೆ ಕ್ಷೇತ್ರಗಳಲ್ಲಿ ದೇಶ ಸಾಧಿಸಿರುವ ಪ್ರಗತಿಯನ್ನು ಕೇಂದ್ರ ಸರ್ಕಾರ ಎತ್ತಿ ತೋರಿಸಿದೆ.
2015ರಲ್ಲಿ ಆರಂಭವಾದ ಡಿಜಿಟಲ್ ಇಂಡಿಯಾ ಯೋಜನೆಯಿಂದ ದೇಶದಲ್ಲಿ ಇಂಟರ್ನೆಟ್ ಬಳಕೆ ನಾಲ್ಕು ಪಟ್ಟು ಹೆಚ್ಚಳವಾಗಿದ್ದು, ಮೊಬೈಲ್ ಡೇಟಾ ವೆಚ್ಚವು ಪ್ರತಿ ಜಿಬಿಗೆ ₹269ರಿಂದ ₹8-10ಕ್ಕೆ ಇಳಿದಿದೆ. ಇದರಿಂದ ಭಾರತದಲ್ಲಿ ಡಿಜಿಟಲ್ ಸಂಪರ್ಕ ವಿಶ್ವದಲ್ಲೇ ಅತ್ಯಂತ ಕೈಗೆಟುಕುವ ದರದಲ್ಲಿ ಲಭ್ಯವಾಗಿದೆ.
₹10,372 ಕೋಟಿ ವೆಚ್ಚದ ಇಂಡಿಯಾAI ಮಿಷನ್ ಅಡಿಯಲ್ಲಿ 45,000ಕ್ಕೂ ಹೆಚ್ಚು ಜಿಪಿಯುಗಳನ್ನು ನಿಯೋಜಿಸಲಾಗಿದ್ದು, 12,519 ಡೇಟಾಸೆಟ್‌ಗಳು, 307 ಎಐ ಮಾದರಿಗಳು, 18 ಶ್ರೇಷ್ಠತಾ ಕೇಂದ್ರಗಳು ಹಾಗೂ 27 ಡೇಟಾ ಮತ್ತು ಎಐ ಪ್ರಯೋಗಾಲಯಗಳು ಕಾರ್ಯನಿರ್ವಹಿಸುತ್ತಿವೆ.

ಭಾರತ ಸೆಮಿಕಂಡಕ್ಟರ್ ಮಿಷನ್ ಅಡಿಯಲ್ಲಿ ಸುಮಾರು ₹1.64 ಲಕ್ಷ ಕೋಟಿ ಮೌಲ್ಯದ 12 ಉತ್ಪಾದನಾ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಇದೇ ವೇಳೆ ಎಲೆಕ್ಟ್ರಾನಿಕ್ಸ್ ಉದ್ಯಮವು ₹13 ಲಕ್ಷ ಕೋಟಿ ಮೌಲ್ಯದ ವಲಯವಾಗಿ ಬೆಳೆಯುವ ಮೂಲಕ ಭಾರತದ ಮೂರನೇ ಅತಿದೊಡ್ಡ ರಫ್ತು ಕ್ಷೇತ್ರವಾಗಿ ಹೊರಹೊಮ್ಮಿದೆ.
ಯುಪಿಐ 2026ರಲ್ಲಿ 10 ವರ್ಷಗಳನ್ನು ಪೂರೈಸುತ್ತಿದ್ದು, 2025-26ನೇ ಹಣಕಾಸು ವರ್ಷದಲ್ಲಿ 24,162 ಕೋಟಿ ವಹಿವಾಟುಗಳನ್ನು ದಾಖಲಿಸಿದೆ. ದೇಶದ ಡಿಜಿಟಲ್ ಪಾವತಿಗಳಲ್ಲಿ ಶೇ.81ರಷ್ಟು ಪಾಲು ಯುಪಿಐ ಹೊಂದಿದೆ.
ಇದಲ್ಲದೆ, ಮಾನ್ಯತೆ ಪಡೆದ ಸ್ಟಾರ್ಟ್‌ಅಪ್‌ಗಳು 23.36 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿದ್ದು, ಸುಮಾರು ಶೇ.48ರಷ್ಟು ಸ್ಟಾರ್ಟ್‌ಅಪ್‌ಗಳಲ್ಲಿ ಕನಿಷ್ಠ ಒಬ್ಬ ಮಹಿಳಾ ನಿರ್ದೇಶಕಿ ಅಥವಾ ಪಾಲುದಾರರಿರುವುದು ಗಮನಾರ್ಹ ಬೆಳವಣಿಗೆಯಾಗಿದೆ.
