Friday, September 25

ಮಾನಸಿಕ ಸ್ವಾಸ್ಥ್ಯ ಕಾಪಾಡುವಲ್ಲಿ ನಿಮ್ಹಾನ್ಸ್ ಕೊಡುಗೆ ಶ್ಲಾಘನೀಯ; ಸಿದ್ದರಾಮಯ್ಯ

ಬೆಂಗಳೂರು: ಮಾನಸಿಕ ಆರೋಗ್ಯದ ಆರೈಕೆ ಜೊತೆಗೆ ರೋಗದ ಕುರಿತಾಗಿ ಸಾಮಾನ್ಯವಾಗಿ ಅಂಟಿಕೊಳ್ಳುವ ಸಮಾಜದ ನಕರಾತ್ಮಕ ದೃಷ್ಟಿಕೋನವನ್ನು ಬಹುತೇಕ ನಿವಾರಿಸುವಲ್ಲಿ ನಿಮ್ಹಾನ್ಸ್ ಯಶಸ್ವಿಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ರಾಜಧಾನಿ ಬೆಂಗಳೂರಿನ ನಿಮ್ಹಾನ್ಸ್’ನ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಪಾರ್ಶ್ವವಾಯು, ತೀವ್ರತರ ಮೆದುಳು ಕಾಯಿಲೆಗಳು ಮತ್ತು ನರರೋಗ ಚಿಕಿತ್ಸೆಯಲ್ಲಿ ಅತ್ಯುತ್ತಮ ಗುಣಮಟ್ಟವನ್ನು ಸಾಧಿಸುವ ಮೂಲಕ ಮಾನಸಿಕ ಸ್ವಾಸ್ಥ್ಯ ಕಾಪಾಡುವಲ್ಲಿ ನಿಮ್ಹಾನ್ಸ್ ಕೊಡುಗೆ ಶ್ಲಾಘನೀಯವಾಗಿದೆ ಎಂದರು.

ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಶ್ರೇಷ್ಠತೆಯನ್ನು ಸಾಧಿಸಿರುವ ರಾಷ್ಟ್ರೀಯ ಮಹತ್ವದ ಈ ಸಂಸ್ಥೆ ಕರ್ನಾಟಕದಲ್ಲಿರುವುದು ನಮಗೆಲ್ಲರಿಗೂ ಅತ್ಯಂತ ಹೆಮ್ಮೆಯ ವಿಷಯ. ರಾಜ್ಯದಾದ್ಯಂತ ಮಾನಸಿಕ ಆರೋಗ್ಯ ಸೇವೆಯನ್ನು ಕಲ್ಪಿಸಲು ಸರ್ಕಾರ ನಿಮ್ಹಾನ್ಸ್ ನೊಂದಿಗೆ ಜೊತೆಗೂಡಿ ಕಾರ್ಯನಿರ್ವಹಿಸುತ್ತಿದೆ. ನಿಮ್ಹಾನ್ಸ್‌ನೊಂದಿಗಿನ ಜಂಟಿ ಸಹಭಾಗಿತ್ವದ ಮೂಲಕ ರಾಜ್ಯದ ಪ್ರತಿಯೊಬ್ಬರಿಗೂ ಮಾನಸಿಕ ಆರೋಗ್ಯ ಸೇವೆಯನ್ನು ಖಾತ್ರಿಪಡಿಸಲು ನಮಗೆ ಸಾಧ್ಯವಾಗಿದೆ ನೆಂದು ಸಿದ್ದರಾಮಯ್ಯ ತಿಳಿಸಿದರು.

ನಮ್ಮ ಸರ್ಕಾರ ಮಾನಸಿಕ ಆರೋಗ್ಯ ಸೇವೆಯನ್ನು ಒದಗಿಸಲು ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ. ಜಿಲ್ಲಾ ಮತ್ತು ತಾಲೂಕು ಮಟ್ಟಗಳಲ್ಲಿ ಆತ್ಮಹತ್ಯೆ ತಡೆ, ದುಶ್ಚಟ ಹೊಂದಿದವರ ಪುನರ್ವಸತಿ ಮತ್ತು ಸಮುದಾಯ ಮಾನಸಿಕ ಆರೋಗ್ಯ ಕಾರ್ಯಕ್ರಮಗಳಿಗೆ ಒತ್ತು ನೀಡಿದೆ ಎಂದವರು ಹೇಳಿದರು.

ಟೆಲಿ ಮಾನಸ್ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದ್ದು, ರಾಜ್ಯದಲ್ಲಿ ಮಾನಸಿಕ ಆರೋಗ್ಯದ ಬೆಂಬಲ ಅಗತ್ಯವಿರುವ ಸುಮಾರು 17 ಲಕ್ಷ ಜನರು ಇದರ ಪ್ರಯೋಜನ ಪಡೆದಿದ್ದಾರೆ. ನಿಮ್ಹಾನ್ಸ್ ಮತ್ತು ಧಾರವಾಡದ ಡಿಮ್ಹಾನ್ಸ್‌ಗಳಲ್ಲಿ ಈ ಘಟಕಗಳು ಕಾರ್ಯ ನಿರ್ವಹಿಸುತ್ತಿದ್ದು, ಅಗತ್ಯ ಆರೋಗ್ಯ ಸೇವೆಯನ್ನು ಕಲ್ಪಿಸುತ್ತಿದೆ ಎಂದು ಮುಖ್ಯಮಂತ್ರಿ ನುಡಿದರು.