Wednesday, August 12

ವಂದೇ ಮಾತರಂ 150ನೇ ವರ್ಷಾಚರಣೆ; ದೆಹಲಿಯಲ್ಲಿ ಹರ್ ಘರ್ ತಿರಂಗ ಬೈಕ್ ರ್ಯಾಲಿ

ನವದೆಹಲಿ: ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ನ 150ನೇ ವರ್ಷಾಚರಣೆ ಅಂಗವಾಗಿ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಬುಧವಾರ ನವದೆಹಲಿಯ ಭಾರತ್ ಮಂಟಪದಲ್ಲಿ ‘ಹರ್ ಘರ್ ತಿರಂಗ’ ಬೈಕ್ ರ್ಯಾಲಿಗೆ ಚಾಲನೆ ನೀಡಿದರು. ಸಂಸತ್ ಸದಸ್ಯರು ಹಾಗೂ ವಿವಿಧ ಸಾರ್ವಜನಿಕ ಪ್ರತಿನಿಧಿಗಳು ಭಾಗವಹಿಸಿದ್ದ ರ್ಯಾಲಿ ಭಾರತ್ ಮಂಟಪದಿಂದ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದವರೆಗೆ ನಡೆಯಿತು.

ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದ ರಾಧಾಕೃಷ್ಣನ್, ‘ವಂದೇ ಮಾತರಂ’ ಮಾತೃಭೂಮಿಯ ಮೇಲಿನ ಪ್ರೀತಿಯನ್ನು ರಾಷ್ಟ್ರೀಯ ಕರ್ತವ್ಯವಾಗಿ ಪರಿವರ್ತಿಸಿ, ಸ್ವಾತಂತ್ರ್ಯ ಹೋರಾಟಕ್ಕೆ ಪ್ರಬಲ ಶಕ್ತಿ ನೀಡಿತ್ತು ಎಂದರು. ಈ ಗೀತೆ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಧೈರ್ಯ, ತ್ಯಾಗ ಮತ್ತು ಭರವಸೆಯನ್ನು ಮೂಡಿಸಿತ್ತು ಎಂದು ಸ್ಮರಿಸಿದರು.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಇತ್ತೀಚಿನ ಭೇಟಿ ವೇಳೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು 1943ರಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದ ಸ್ಥಳ ಹಾಗೂ ಸೆಲ್ಯುಲಾರ್ ಜೈಲಿನಲ್ಲಿ ಬಂಧಿತರಾಗಿದ್ದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ನೆನಪಿಸಿಕೊಂಡರು. ಹಲವರು ‘ವಂದೇ ಮಾತರಂ’ ಘೋಷಣೆ ಕೂಗುತ್ತಾ ಗಲ್ಲಿಗೇರಿದರು ಎಂದು ಹೇಳಿದರು.

ತಮಿಳುನಾಡಿನ ಸ್ವಾತಂತ್ರ್ಯ ಹೋರಾಟಗಾರರಾದ ವಿ.ಒ. ಚಿದಂಬರಂ ಪಿಳ್ಳೈ, ಸುಬ್ರಮಣ್ಯ ಶಿವ, ತಿರುಪ್ಪೂರು ಕುಮಾರನ್, ವಾಂಚಿನಾಥನ್ ಹಾಗೂ ರಾಷ್ಟ್ರಕವಿ ಸುಬ್ರಮಣ್ಯ ಭಾರತಿ ಅವರ ಕೊಡುಗೆಯನ್ನೂ ಅವರು ಸ್ಮರಿಸಿದರು.

2022ರಲ್ಲಿ ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದ ‘ಹರ್ ಘರ್ ತಿರಂಗ’ ಅಭಿಯಾನ ಇದೀಗ ತಿರಂಗ ಯಾತ್ರೆ, ಬೈಕ್ ಹಾಗೂ ಸೈಕಲ್ ರ್ಯಾಲಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಜನಾಂದೋಲನವಾಗಿ ರೂಪುಗೊಂಡಿದೆ ಎಂದರು.

ಸಂಸದರು ತಮ್ಮ ಕ್ಷೇತ್ರಗಳಲ್ಲಿ ಅಭಿಯಾನವನ್ನು ಜನಪ್ರಿಯಗೊಳಿಸಿ, ನಾಗರಿಕರು ಹೆಮ್ಮೆಯಿಂದ ರಾಷ್ಟ್ರಧ್ವಜ ಹಾರಿಸುವಂತೆ ಪ್ರೋತ್ಸಾಹಿಸಬೇಕು ಎಂದು ರಾಧಾಕೃಷ್ಣನ್ ಕರೆ ನೀಡಿದರು. ಕೇಂದ್ರ ಸಚಿವರು, ಸಂಸದರು ಹಾಗೂ ಸಾರ್ವಜನಿಕ ಪ್ರತಿನಿಧಿಗಳು ರ್ಯಾಲಿಯಲ್ಲಿ ಭಾಗವಹಿಸಿದ್ದರು.