Wednesday, August 12

ಬಿಡದಿ ಟೌನ್‌ಶಿಪ್ ಜಾರಿಗೆ ರೈತರಿಂದಲೇ ಒತ್ತಡ; ಸಿಎಂಗೆ ಮನವಿ

ಬೆಂಗಳೂರು: ಬಿಡದಿ ಟೌನ್‌ಶಿಪ್ ಯೋಜನೆಯನ್ನು ಜಾರಿಗೊಳಿಸುವುದು ಹಾಗೂ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮಗಳಲ್ಲಿ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸುವಂತೆ ಒತ್ತಾಯಿಸಿ ಆಯಾ ಗ್ರಾಮಗಳ ರೈತರ ನಿಯೋಗ ಮಂಗಳವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.

ಮುಖ್ಯಮಂತ್ರಿ ಕಚೇರಿ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ರೈತರು ಕಳೆದ ಎರಡು ದಶಕಗಳಿಂದ ರೆಡ್‌ಜೋನ್‌ ವ್ಯಾಪ್ತಿಯ ನಿರ್ಬಂಧಗಳಿಂದ ತೀವ್ರ ಸಂಕಷ್ಟ ಎದುರಿಸುತ್ತಿರುವುದಾಗಿ ಮುಖ್ಯಮಂತ್ರಿಗಳ ಮುಂದೆ ಅಳಲು ತೋಡಿಕೊಂಡಿದೆ.

ವೃಷಭಾವತಿ ನದಿಯ ಕೊಳಚೆ ನೀರಿನಿಂದಾಗಿ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗಿದ್ದು, ಹಸಿರಾಗಿ ಕಾಣುವ ತೆಂಗಿನ ತೋಟಗಳಲ್ಲೂ ನಿರೀಕ್ಷಿತ ಇಳುವರಿ ಬರುತ್ತಿಲ್ಲ ಎಂದು ರೈತರು ಹೇಳಿದರು. ಕಲುಷಿತ ನೀರಿನ ಪರಿಣಾಮ ಹಾಲಿನ ಗುಣಮಟ್ಟಕ್ಕೂ ಧಕ್ಕೆಯಾಗಿದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

ರೆಡ್‌ಜೋನ್‌ ನಿರ್ಬಂಧಗಳಿಂದ ಆಸ್ಪತ್ರೆ, ಕಲ್ಯಾಣ ಮಂಟಪ ಸೇರಿದಂತೆ ಹಲವು ಮೂಲಸೌಕರ್ಯ ಮತ್ತು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದ ಗ್ರಾಮಗಳ ಅಭಿವೃದ್ಧಿಯೇ ಸ್ಥಗಿತಗೊಂಡಿದೆ ಎಂದು ರೈತರು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದಾರೆ.

ಪಕ್ಕದ ಗ್ರಾಮಗಳ ಜಮೀನುಗಳಿಗೆ ಬ್ಯಾಂಕ್‌ಗಳು ದೊಡ್ಡ ಮೊತ್ತದ ಸಾಲ ನೀಡುತ್ತಿದ್ದರೆ, ತಮ್ಮ ಜಮೀನುಗಳ ಮೇಲೆ ಸಾಲ ಪಡೆಯುವುದು ಕಷ್ಟವಾಗಿದೆ ಎಂದು ರೈತರು ಹೇಳಿದರು. ಪಕ್ಕದ ಊರುಗಳಲ್ಲಿ ಜಮೀನಿಗೆ ₹1 ಕೋಟಿವರೆಗೆ ಸಾಲ ಸಿಗುತ್ತಿದ್ದರೂ, ತಮ್ಮ ಜಮೀನಿಗೆ ₹1 ಲಕ್ಷ ಸಾಲ ಪಡೆಯುವುದೂ ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮದುವೆ ಹಾಗೂ ಇತರ ತುರ್ತು ಸಂದರ್ಭಗಳಲ್ಲಿ ಜಮೀನು ಮಾರಾಟ ಮಾಡಲು ಅಥವಾ ಆಸ್ತಿಯನ್ನು ಆಧರಿಸಿ ಆರ್ಥಿಕ ಚಟುವಟಿಕೆ ನಡೆಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ರೆಡ್‌ಜೋನ್‌ ಸೇರಿದಂತೆ ಹಲವು ಸಮಸ್ಯೆಗಳಿಂದ ಗ್ರಾಮಸ್ಥರಿಗೆ ಮುಕ್ತಿ ಕಲ್ಪಿಸಿ, ಬಿಡದಿ ಟೌನ್‌ಶಿಪ್ ಯೋಜನೆಯನ್ನು ಜಾರಿಗೊಳಿಸುವಂತೆ ರೈತರು ಮನವಿ ಮಾಡಿದ್ದಾರೆ.

ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮಗಳ ಭೂಸ್ವಾಧೀನ ಪ್ರಕ್ರಿಯೆಗೆ ಅಂತಿಮ ಅಧಿಸೂಚನೆ ಹೊರಡಿಸುವ ಮೂಲಕ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ನಿಯೋಗ ಒತ್ತಾಯಿಸಿದೆ.

ಬಿಡದಿ ಟೌನ್‌ಶಿಪ್ ಯೋಜನೆ ಜಾರಿಯಾಗಬೇಕು ಹಾಗೂ ಬೈರಮಂಗಲ ಮತ್ತು ಕಂಚುಗಾರನಹಳ್ಳಿಯಲ್ಲಿ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಬೇಕು ಎಂದು ಒತ್ತಾಯಿಸಿ ಇಂದು ಆಯಾ ಗ್ರಾಮಗಳ ರೈತರ ನಿಯೋಗವು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @DKShivakumar ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

“ಕಳೆದ 20 ವರ್ಷಗಳಿಂದ ನಾವು ರೆಡ್‌ಜೋನ್‌ನಿಂದ ತೀವ್ರ… pic.twitter.com/EnRcXcOZPr

— CM of Karnataka (@CMofKarnataka) August 11, 2026