
ಚೆನ್ನೈ: ನಿರ್ದೇಶಕ ಮಥಿಮಾರನ್ ಪುಗಝೇಂಡಿ ನಿರ್ದೇಶನದ ಬಹುನಿರೀಕ್ಷಿತ ಕ್ರೀಡಾ ಸಾಹಸ ನಾಟಕ ‘ಮಂದಾಡಿ’ ಚಿತ್ರದ ಆಕ್ಷನ್‌ಪ್ಯಾಕ್‌ಡ್ ಟೀಸರ್ ಬಿಡುಗಡೆಯಾಗಿದೆ. ಸೂರಿ ಮತ್ತು ತೆಲುಗು ನಟ ಸುಹಾಸ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರ ಸೆಪ್ಟೆಂಬರ್ 10ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.
ನಿರ್ಮಾಣ ಸಂಸ್ಥೆ ಆರ್‌ಎಸ್ ಇನ್ಫೋಟೈನ್‌ಮೆಂಟ್ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಟೀಸರ್ ಬಿಡುಗಡೆ ಕುರಿತು ಮಾಹಿತಿ ಹಂಚಿಕೊಂಡಿದೆ.

ಟೀಸರ್‌ನಲ್ಲಿ ನಾವಿಕರು ದೋಣಿ ಓಟಕ್ಕೆ ಸಿದ್ಧತೆ ನಡೆಸುವ ದೃಶ್ಯಗಳೊಂದಿಗೆ ಕಥೆಯ ಪರಿಚಯವಾಗುತ್ತದೆ. ನಟ ಸತ್ಯರಾಜ್ ಅವರ ಹಿನ್ನೆಲೆ ಧ್ವನಿ ಟೀಸರ್‌ಗೆ ಮತ್ತಷ್ಟು ಕುತೂಹಲ ಮೂಡಿಸಿದೆ. ಚಿತ್ರವು ಸಮುದ್ರ ಮತ್ತು ಕ್ರೀಡೆಯ ಹಿನ್ನೆಲೆಯಲ್ಲಿನ ಸಾಹಸಮಯ ಕಥೆಯನ್ನು ಹೊಂದಿರುವುದು ಟೀಸರ್‌ನಿಂದ ಸ್ಪಷ್ಟವಾಗುತ್ತದೆ.
ಸೂರಿ ಧೈರ್ಯ ಮತ್ತು ದೃಢನಿಶ್ಚಯ ಹೊಂದಿರುವ ನಾವಿಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸಮುದ್ರದ ಸವಾಲುಗಳ ನಡುವೆ ನಡೆಯುವ ಪೈಪೋಟಿಯೇ ಚಿತ್ರದ ಪ್ರಮುಖ ಅಂಶವಾಗಿದೆ.
ಚಿತ್ರಕ್ಕೆ ಸೆನ್ಸಾರ್ ಮಂಡಳಿ ಈಗಾಗಲೇ ಯು/ಎ ಪ್ರಮಾಣಪತ್ರ ನೀಡಿದೆ. ‘ಮಂದಾಡಿ’ ಸುಹಾಸ್ ಅವರ ತಮಿಳು ಚೊಚ್ಚಲ ಚಿತ್ರವಾಗಿದ್ದು, ಮಹಿಮಾ ನಂಬಿಯಾರ್, ಸತ್ಯರಾಜ್, ರವೀಂದ್ರ ವಿಜಯ್, ಮಿಥುನ್ ಮತ್ತು ಬಾಲಸರವಣನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಪ್ಯಾನ್-ಇಂಡಿಯಾ ಚಿತ್ರವಾಗಿ ಮೂಡಿಬಂದಿರುವ ‘ಮಂದಾಡಿ’ ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
