
ಬೆಂಗಳೂರು: ಪ್ರಾಮಾಣಿಕತೆ, ಕಠಿಣ ಪರಿಶ್ರಮ ಮತ್ತು ನಿರಂತರ ಪ್ರಯತ್ನಗಳು ಯಶಸ್ವಿ ವಕೀಲ ವೃತ್ತಿಯ ಮೂಲಾಧಾರಗಳು ಎಂದು ಅರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದರು.
ಬೆಂಗಳೂರಿನಲ್ಲಿ ಕರ್ನಾಟಕ ಮುಸ್ಲಿಂ ವಕೀಲರ ವೇದಿಕೆ ಆಯೋಜಿಸಿದ್ದ ‘ಕರ್ನಾಟಕ ವಕೀಲರ ಸಮ್ಮೇಳನ–2026’ರಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಚಿವನಾಗಿ ಅಲ್ಲ, ವಕೀಲನಾಗಿ ಸಹ ವೃತ್ತಿಪರರೊಂದಿಗೆ ಬೆರೆಯಲು ಈ ಸಮ್ಮೇಳನದಲ್ಲಿ ಭಾಗವಹಿಸಿರುವುದಾಗಿ ಖಾದರ್ ತಿಳಿಸಿದರು. ತಮ್ಮ ತಂದೆ ದಿವಂಗತ ಯು.ಟಿ. ಫರೀದ್ ಅವರು 1959ರಲ್ಲಿ ಸಾರ್ವಜನಿಕ ಸೇವೆಗೆ ಪ್ರವೇಶಿಸುವ ಮೊದಲು ವಕೀಲ ವೃತ್ತಿ ಆರಂಭಿಸಲು ಮಂಗಳೂರಿನಿಂದ ಬೆಂಗಳೂರಿಗೆ ಬಂದಿದ್ದರು. ಹೀಗಾಗಿ ಈ ಕಾರ್ಯಕ್ರಮ ತಮಗೆ ವೈಯಕ್ತಿಕವಾಗಿಯೂ ಮಹತ್ವದ್ದಾಗಿದೆ ಎಂದರು.

ತಾವು ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಬಳಿಕ ಇದೇ ವೃತ್ತಿಪರ ಹಾದಿಯಲ್ಲಿ ಸಾಗಿದ್ದಾಗಿ ಸ್ಮರಿಸಿದ ಅವರು, ಸಮ್ಮೇಳನವು ತಮ್ಮ ವೃತ್ತಿಜೀವನದ ಬೇರುಗಳನ್ನು ನೆನಪಿಸಿಕೊಳ್ಳಲು ಅವಕಾಶ ಕಲ್ಪಿಸಿದೆ ಎಂದು ಹೇಳಿದರು.
ನ್ಯಾಯಯುತ ಹಾಗೂ ಪ್ರಗತಿಪರ ಸಮಾಜ ನಿರ್ಮಾಣದಲ್ಲಿ ವಕೀಲರ ಪಾತ್ರ ಮಹತ್ವದ್ದಾಗಿದೆ. ಕಾನೂನು ವೃತ್ತಿಯಲ್ಲಿರುವವರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವುದು ಅಗತ್ಯ. ಈ ನಿಟ್ಟಿನಲ್ಲಿ ವಕೀಲರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿರುವ ಕರ್ನಾಟಕ ಮುಸ್ಲಿಂ ವಕೀಲರ ವೇದಿಕೆಯ ಪ್ರಯತ್ನ ಶ್ಲಾಘನೀಯ ಎಂದು ಹೇಳಿದರು.

ಯುವ ವಕೀಲರು ಅಡ್ಡದಾರಿಗಳನ್ನು ಅವಲಂಬಿಸದೆ ವೃತ್ತಿಪರ ನೈತಿಕತೆಯನ್ನು ಕಾಪಾಡಿಕೊಳ್ಳಬೇಕು. ಪ್ರಾಮಾಣಿಕತೆಯನ್ನು ಶಕ್ತಿಯನ್ನಾಗಿಸಿಕೊಂಡು, ಪರಿಶ್ರಮದ ಮೂಲಕ ವೃತ್ತಿಯಲ್ಲಿ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.
ಹಿರಿಯ ವಕೀಲರು ಕಿರಿಯರಿಗೆ ಮಾರ್ಗದರ್ಶನ ನೀಡಿ, ಅವರ ವೃತ್ತಿಪರ ಕೌಶಲಗಳನ್ನು ಬೆಳೆಸಲು ನೆರವಾಗಬೇಕು. ನ್ಯಾಯ ಮತ್ತು ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುವ ಮುಂದಿನ ಪೀಳಿಗೆಯನ್ನು ರೂಪಿಸುವ ಹೊಣೆಗಾರಿಕೆ ಹಿರಿಯರ ಮೇಲಿದೆ ಎಂದು ಅಭಿಪ್ರಾಯಪಟ್ಟರು.
ಹಿರಿಯ ಮತ್ತು ಕಿರಿಯ ವಕೀಲರ ನಡುವಿನ ಸಹಕಾರದಿಂದ ಕಾನೂನು ವೃತ್ತಿ ಮತ್ತಷ್ಟು ಬಲಗೊಳ್ಳುವುದರೊಂದಿಗೆ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ ಎಂದು ಖಾದರ್ ಹೇಳಿದರು.
