
ಹೈದರಾಬಾದ್: ನಟ ಅಲ್ಲು ಅರ್ಜುನ್ ಹಾಗೂ ನಿರ್ದೇಶಕ ಅಟ್ಲಿ ಕಾಂಬಿನೇಷನ್ನ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ರಾಕಾ’ ಬಿಡುಗಡೆಯ ಮುನ್ನವೇ ಗಿನ್ನೆಸ್ ವಿಶ್ವ ದಾಖಲೆಗೆ ಸೇರ್ಪಡೆಯಾಗಿದೆ.
ಸನ್ ಪಿಕ್ಚರ್ಸ್ ನಿರ್ಮಾಣದ ಈ ಬಿಗ್ ಬಜೆಟ್ ಸಿನಿಮಾದಲ್ಲಿ ಒಂದೇ ಸೆಷನ್ನಲ್ಲಿ 37 ಕಲಾವಿದರ ಮೋಷನ್ ಕ್ಯಾಪ್ಚರ್ ಅನ್ನು ರಿಯಲ್ಟೈಮ್ನಲ್ಲಿ ಏಕಕಾಲಕ್ಕೆ ಸೆರೆಹಿಡಿಯಲಾಗಿದೆ. 2026ರ ಫೆಬ್ರವರಿಯಲ್ಲಿ ನಡೆದ ಈ ಪ್ರಕ್ರಿಯೆಯಲ್ಲಿ 4 ವರ್ಷದ ಮಗುವಿನಿಂದ 70 ವರ್ಷದ ಹಿರಿಯರವರೆಗೆ ಕಲಾವಿದರು ಭಾಗವಹಿಸಿದ್ದರು.
ಈ ದಾಖಲೆಗಾಗಿ ಚಿತ್ರತಂಡವು ಅತ್ಯಾಧುನಿಕ ತಂತ್ರಜ್ಞಾನ ಬಳಸಿದ್ದು, ಬರೋಬ್ಬರಿ 92 ಆಪ್ಟಿಕಲ್ ಮೋಷನ್ ಕ್ಯಾಪ್ಚರ್ ಕ್ಯಾಮೆರಾಗಳು, ಫೇಶಿಯಲ್ ಕ್ಯಾಪ್ಚರ್ ಮತ್ತು ಅನ್ರಿಯಲ್ ಎಂಜಿನ್ ಆಧಾರಿತ ರಿಯಲ್ಟೈಮ್ ದೃಶ್ಯೀಕರಣ ವ್ಯವಸ್ಥೆಯನ್ನು ಬಳಸಿದೆ.

ಸೆಪ್ಟೆಂಬರ್ 15ರಂದು ಗಿನ್ನೆಸ್ ವಿಶ್ವ ದಾಖಲೆ ಸಂಸ್ಥೆ ಈ ಸಾಧನೆಯನ್ನು ಅಧಿಕೃತವಾಗಿ ದೃಢಪಡಿಸಿದೆ. ಹೈದರಾಬಾದ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಿನ್ನೆಸ್ ತೀರ್ಪುಗಾರ ಸ್ವಪ್ನಿಲ್ ದಂಗ್ರಿಕರ್, ಅಲ್ಲು ಅರ್ಜುನ್ ಹಾಗೂ ಅಟ್ಲಿಗೆ ಪ್ರಮಾಣಪತ್ರಗಳನ್ನು ಹಸ್ತಾಂತರಿಸಿದರು.
ಅಲ್ಲು ಅರ್ಜುನ್ ಹುಟ್ಟುಹಬ್ಬದ ಪ್ರಯುಕ್ತ ಏಪ್ರಿಲ್ 8ರಂದು ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿತ್ತು. ಬೋಳು ತಲೆ, ಕಣ್ಣಿಗೆ ಕಾಡಿಗೆ ಹಾಗೂ ಪ್ರಾಣಿಯ ಉಗುರುಗಳ ವಿನ್ಯಾಸದೊಂದಿಗೆ ಅಲ್ಲು ಅರ್ಜುನ್ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದರು.
‘ರಾಕಾ’ ಕೇವಲ ಸಿನಿಮಾವಲ್ಲ. ಕಳೆದ 18 ವರ್ಷಗಳಿಂದ ನನ್ನಲ್ಲಿದ್ದ ಒಂದು ಆಲೋಚನೆ ಎಂದು ಅಟ್ಲಿ ಈ ಹಿಂದೆ ಹೇಳಿಕೊಂಡಿದ್ದರು.
ಚಿತ್ರದಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸಿದ್ದು, ಅತ್ಯಾಧುನಿಕ ವಿಎಫ್ಎಕ್ಸ್ ಹಾಗೂ ಮೋಷನ್ ಕ್ಯಾಪ್ಚರ್ ತಂತ್ರಜ್ಞಾನದಿಂದಾಗಿ ಸಿನಿಮಾ ಭಾರಿ ಕುತೂಹಲ ಮೂಡಿಸಿದೆ.
