Monday, September 21

ಸೆ 28ರಿಂದ 30ರವರೆಗೆ ಮುಷ್ಕರಕ್ಕೆ ಬ್ಯಾಂಕ್ ಸಂಘಟನೆಗಳ ಕರೆ; ಸತತ ಐದು ದಿನ ಸೇವೆಗೆ ಅಡ್ಡಿ ಸಾಧ್ಯತೆ

ನವದೆಹಲಿ: ಸೆಪ್ಟೆಂಬರ್ 28ರಿಂದ 30ರವರೆಗೆ ಮೂರು ದಿನಗಳ ಮುಷ್ಕರಕ್ಕೆ ಬ್ಯಾಂಕ್ ಸಂಘಟನೆಗಳು ಕರೆ ನೀಡಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕ ವಲಯದ ಬ್ಯಾಂಕುಗಳು (PSB) ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ (RRB) ಉದ್ಯೋಗಿಗಳು ಮುಷ್ಕರದಿಂದ ದೂರವಿದ್ದು, ಬ್ಯಾಂಕಿಂಗ್ ಸೇವೆಗಳಿಗೆ ಅಡಚಣೆಯಾಗದಂತೆ ಸಹಕರಿಸಬೇಕು ಎಂದು ಕೇಂದ್ರ ಸರ್ಕಾರ ಮನವಿ ಮಾಡಿದೆ.

ಬ್ಯಾಂಕ್ ಸಂಘಟನೆಗಳು ಅಕ್ಟೋಬರ್ 26ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವ ಪ್ರಸ್ತಾವನೆಯನ್ನೂ ಮುಂದಿಟ್ಟಿವೆ. ಐದು ದಿನಗಳ ಕೆಲಸದ ವ್ಯವಸ್ಥೆ ಜಾರಿ ಹಾಗೂ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಕ (PLI) ಯೋಜನೆ ಹಿಂಪಡೆಯುವುದು ಪ್ರಮುಖ ಬೇಡಿಕೆಗಳಾಗಿವೆ.

ಉದ್ಯೋಗಿಗಳ ಪ್ರತಿನಿಧಿಗಳೊಂದಿಗೆ ನಡೆದ ಮಾತುಕತೆ ಬಳಿಕ PLI ಯೋಜನೆಯನ್ನು ಸದ್ಯಕ್ಕೆ ತಡೆಹಿಡಿಯಲು ನಿರ್ಧರಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ. ಹೀಗಾಗಿ ಸಂಘಟನೆಗಳ ಎರಡು ಪ್ರಮುಖ ಬೇಡಿಕೆಗಳಲ್ಲಿ ಒಂದನ್ನು ಈಡೇರಿಸಲಾಗಿದೆ ಎಂದು ಸರ್ಕಾರ ಹೇಳಿದೆ.

ಐದು ದಿನಗಳ ಕೆಲಸದ ಬೇಡಿಕೆ ಕುರಿತು ಹಲವು ಸುತ್ತಿನ ಮಾತುಕತೆಗಳನ್ನು ನಡೆಸಲಾಗಿದ್ದು, ಬಾಕಿ ಇರುವ ವಿಷಯಗಳನ್ನು ಸಂವಾದದ ಮೂಲಕ ಬಗೆಹರಿಸಿಕೊಳ್ಳುವಂತೆ ಉದ್ಯೋಗಿ ಸಂಘಟನೆಗಳಿಗೆ ಸರ್ಕಾರ ಮನವಿ ಮಾಡಿದೆ.

ಬ್ಯಾಂಕ್ ಉದ್ಯೋಗಿಗಳ ಕಲ್ಯಾಣಕ್ಕಾಗಿ ಇತ್ತೀಚಿನ ವರ್ಷಗಳಲ್ಲಿ ಹಲವು ಕ್ರಮಗಳನ್ನು ಕೈಗೊಂಡಿರುವುದಾಗಿ ಸರ್ಕಾರ ತಿಳಿಸಿದೆ. ಪರಿಷ್ಕೃತ ವೇತನ ಮತ್ತು ಭತ್ಯೆಗಳು, ಸಿಬ್ಬಂದಿ ಕಲ್ಯಾಣ ನಿಧಿಯಲ್ಲಿ ಶೇ.56ರಷ್ಟು ಹೆಚ್ಚಳ, ಬಡ್ತಿ ಮತ್ತು ವರ್ಗಾವಣೆ ಪ್ರಕ್ರಿಯೆ ಸರಳೀಕರಣ, ಕುಟುಂಬ ಪಿಂಚಣಿ ಪರಿಷ್ಕರಣೆ, ನಿವೃತ್ತರಿಗೆ ವೈದ್ಯಕೀಯ ವಿಮೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಜಾರಿಗೊಳಿಸಲಾಗಿದೆ ಎಂದು ಹೇಳಿದೆ.

2014-15ರಿಂದ 2025-26ರವರೆಗೆ ಸಾರ್ವಜನಿಕ ವಲಯದ ಬ್ಯಾಂಕುಗಳು ಸುಮಾರು 4.82 ಲಕ್ಷ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿವೆ. ಕಳೆದ ಮೂರು ವರ್ಷಗಳಲ್ಲಿ ನೇಮಕಾತಿ ಪ್ರಮಾಣ ದ್ವಿಗುಣಗೊಂಡಿದೆ. ಜುಲೈ 1, 2026ರ ವೇಳೆಗೆ ಅಧಿಕಾರಿ ಹುದ್ದೆಗಳಲ್ಲಿ ಶೇ.95.84 ಹಾಗೂ ಅಧೀನ/ಅವಾರ್ಡ್ ಸಿಬ್ಬಂದಿ ಹುದ್ದೆಗಳಲ್ಲಿ ಶೇ.92ರಷ್ಟು ಹುದ್ದೆಗಳು ಭರ್ತಿಯಾಗಿವೆ ಎಂದು ಸರ್ಕಾರ ತಿಳಿಸಿದೆ.

ಸೆಪ್ಟೆಂಬರ್ 30ರಂದು ಬ್ಯಾಂಕುಗಳ ಅರ್ಧವಾರ್ಷಿಕ ಲೆಕ್ಕ ಮುಕ್ತಾಯದ ದಿನವೇ ಮುಷ್ಕರ ನಡೆಯುವುದರಿಂದ ಪರಿಣಾಮ ಗಂಭೀರವಾಗಬಹುದು ಎಂದು ಸರ್ಕಾರ ಎಚ್ಚರಿಸಿದೆ. ಮುಷ್ಕರ ಮತ್ತು ಹಿಂದಿನ ವಾರಾಂತ್ಯ ಸೇರಿ ಸತತ ಐದು ದಿನಗಳ ಕಾಲ ಬ್ಯಾಂಕಿಂಗ್ ಸೇವೆಗಳಿಗೆ ಅಡಚಣೆ ಉಂಟಾಗುವ ಸಾಧ್ಯತೆಯಿದ್ದು, ಗ್ರಾಹಕರು, ಉದ್ಯಮಗಳು, ಸರ್ಕಾರಿ ವಹಿವಾಟುಗಳು ಹಾಗೂ ಅಂತರರಾಷ್ಟ್ರೀಯ ಬ್ಯಾಂಕಿಂಗ್ ಕಾರ್ಯಾಚರಣೆಗಳ ಮೇಲೂ ಪರಿಣಾಮ ಬೀರಬಹುದು ಎಂದು ಹೇಳಿದೆ.

ಮುಷ್ಕರದ ಬದಲಿಗೆ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಮನವಿ ಮಾಡಿರುವ ಸರ್ಕಾರ, ಬ್ಯಾಂಕಿಂಗ್ ಕ್ಷೇತ್ರದ ಸಿಬ್ಬಂದಿಯ ನೈಜ ಕಾಳಜಿಗಳನ್ನು ಪರಿಹರಿಸಲು ಬದ್ಧವಾಗಿರುವುದಾಗಿ ತಿಳಿಸಿದೆ. ಹಣಕಾಸು ಸೇರ್ಪಡೆ, ಡಿಜಿಟಲ್ ಬ್ಯಾಂಕಿಂಗ್ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕಿಂಗ್ ಸೇವೆಗಳ ನಿರಂತರತೆಗೆ ಸಾರ್ವಜನಿಕ ವಲಯದ ಬ್ಯಾಂಕುಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಸರ್ಕಾರ ಹೇಳಿದೆ.