Saturday, October 10

ವಿಶ್ವಸಂಸ್ಥೆಯಲ್ಲಿ ಭಾರತ–ಮಾಲಿ ಜಂಟಿಯಾಗಿ ವಿಶ್ವ ಹತ್ತಿ ದಿನ ಆಚರಣೆ

ನ್ಯೂಯಾರ್ಕ್: ಸುಸ್ಥಿರ ಹತ್ತಿ ಉತ್ಪಾದನೆ, ಗ್ರಾಮೀಣ ಜೀವನೋಪಾಯ ಮತ್ತು ಜಾಗತಿಕ ಮೌಲ್ಯ ಸರಪಳಿಗಳನ್ನು ಬಲಪಡಿಸುವ ಉದ್ದೇಶದಿಂದ ಭಾರತ ಮತ್ತು ಮಾಲಿ ದೇಶಗಳು ಅಕ್ಟೋಬರ್ 7ರಂದು ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಜಂಟಿಯಾಗಿ ವಿಶ್ವ ಹತ್ತಿ ದಿನವನ್ನು ಆಚರಿಸಿದವು.

‘ಸುಸ್ಥಿರತೆಗಾಗಿ ಹತ್ತಿ: ಜೀವನೋಪಾಯ, ಮೌಲ್ಯವರ್ಧನೆ ಮತ್ತು ಪಾಲುದಾರಿಕೆ’ ಎಂಬ ವಿಷಯದಡಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ದೇಶಗಳ ರಾಜತಾಂತ್ರಿಕರು, ಶಾಸಕರು ಹಾಗೂ ಅಂತರರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದರು. ಆರ್ಥಿಕ ಅಭಿವೃದ್ಧಿ, ಅಂತರರಾಷ್ಟ್ರೀಯ ವ್ಯಾಪಾರ ಮತ್ತು ಬಡತನ ನಿರ್ಮೂಲನೆಯಲ್ಲಿ ಹತ್ತಿಯ ಪಾತ್ರವನ್ನು ಗುರುತಿಸಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ನಿರ್ಣಯ 75/318ರ ಮೂಲಕ ಅಕ್ಟೋಬರ್ 7ನ್ನು ವಿಶ್ವ ಹತ್ತಿ ದಿನವೆಂದು ಘೋಷಿಸಿತ್ತು.

ವಿಶ್ವಸಂಸ್ಥೆಗೆ ಭಾರತದ ಖಾಯಂ ಪ್ರತಿನಿಧಿ, ರಾಯಭಾರಿ ಹರೀಶ್ ಪರ್ವತನೇನಿ ಮಾತನಾಡಿ, ಮಹಾತ್ಮ ಗಾಂಧೀಜಿ ಹತ್ತಿ ಮತ್ತು ನೂಲುವ ಚಕ್ರವನ್ನು ಸ್ವಾವಲಂಬನೆ ಹಾಗೂ ಘನತೆಯ ಸಂಕೇತಗಳಾಗಿ ಪ್ರತಿಪಾದಿಸಿದ್ದನ್ನು ಸ್ಮರಿಸಿದರು.

ಹತ್ತಿ ಉತ್ಪಾದಕರಿಗೆ ಹೆಚ್ಚಿನ ಬೆಂಬಲ, ಮಾರುಕಟ್ಟೆ ಪ್ರವೇಶದ ಸುಧಾರಣೆ, ಸುಸ್ಥಿರ ಕೃಷಿ ಪದ್ಧತಿಗಳ ಅಳವಡಿಕೆ, ತಂತ್ರಜ್ಞಾನದ ಬಳಕೆ ಮತ್ತು ಅಂತರರಾಷ್ಟ್ರೀಯ ಸಹಕಾರಕ್ಕೆ ಆದ್ಯತೆ ನೀಡುವಂತೆ ಅವರು ಕರೆ ನೀಡಿದರು.

ಮಾಲಿಯ ಖಾಯಂ ಪ್ರತಿನಿಧಿ, ರಾಯಭಾರಿ ಇಸ್ಸಾ ಕಾನ್ಫೌರೊ ಅವರು ತಮ್ಮ ದೇಶದ ಆರ್ಥಿಕತೆ ಮತ್ತು ಗ್ರಾಮೀಣ ಜನರ ಜೀವನೋಪಾಯದಲ್ಲಿ ಹತ್ತಿಯ ಮಹತ್ವವನ್ನು ವಿವರಿಸಿದರು. ಹತ್ತಿ ಸಂಸ್ಕರಣಾ ಸಾಮರ್ಥ್ಯದ ಕೊರತೆ, ಉತ್ಪಾದನಾ ಒಳಸುರಿಗಳ ಹೆಚ್ಚಿನ ವೆಚ್ಚ ಮತ್ತು ಮಾರುಕಟ್ಟೆ ಪ್ರವೇಶದಲ್ಲಿನ ಅಡೆತಡೆಗಳು ಪ್ರಮುಖ ಸವಾಲುಗಳಾಗಿವೆ ಎಂದು ತಿಳಿಸಿದರು. ಈ ಸಮಸ್ಯೆಗಳನ್ನು ಎದುರಿಸಲು ಭಾರತ ಸೇರಿದಂತೆ ವಿವಿಧ ದೇಶಗಳೊಂದಿಗೆ ಸಹಕಾರಕ್ಕೆ ಒಲವು ವ್ಯಕ್ತಪಡಿಸಿದರು.

ಭಾರತೀಯ ಸಂಸದರಾದ ಅಸಿತ್ ಕುಮಾರ್ ಮಾಲ್ ಮತ್ತು ಎಲ್.ಕೆ. ಸುಧೀಶ್ ಅವರು ಸಾಂಪ್ರದಾಯಿಕ ಕರಕುಶಲತೆ ಹಾಗೂ ಜವಳಿ ಉದ್ಯಮವು ಉದ್ಯೋಗ ಸೃಷ್ಟಿ ಮತ್ತು ಹತ್ತಿಯ ಮೌಲ್ಯವರ್ಧನೆಯಲ್ಲಿ ವಹಿಸುವ ಪಾತ್ರವನ್ನು ಪ್ರಸ್ತಾಪಿಸಿದರು.

ಪಶ್ಚಿಮ ಬಂಗಾಳದ ಕಾಂತ ಕಸೂತಿ ಮಹಿಳೆಯರ ಜೀವನೋಪಾಯಕ್ಕೆ ನೆರವಾಗುವ ಸಾಂಪ್ರದಾಯಿಕ ಕರಕುಶಲತೆಯ ಉದಾಹರಣೆಯಾಗಿದೆ ಎಂದು ಅಸಿತ್ ಕುಮಾರ್ ಮಾಲ್ ತಿಳಿಸಿದರು. ತಮಿಳುನಾಡಿನ ಹತ್ತಿ ನಿಟ್‌ವೇರ್ ಉದ್ಯಮ, ಸಣ್ಣ ಕೈಗಾರಿಕೆಗಳು ಮತ್ತು ಜವಳಿ ಮೂಲಸೌಕರ್ಯಗಳ ಬೆಳವಣಿಗೆಯನ್ನು ಎಲ್.ಕೆ. ಸುಧೀಶ್ ಉಲ್ಲೇಖಿಸಿದರು. ಜವಳಿ ಉತ್ಪಾದನಾ ವಲಯಕ್ಕೆ ಉತ್ತೇಜನ ನೀಡುವ ಪಿಎಂ ಮಿತ್ರ ಯೋಜನೆಯನ್ನೂ ಅವರು ಪ್ರಸ್ತಾಪಿಸಿದರು.

ಜವಳಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಪದ್ಮಿನಿ ಸಿಂಗ್ಲಾ ಅವರು ಹತ್ತಿಯ ಉತ್ಪಾದಕತೆ, ಗುಣಮಟ್ಟ ಮತ್ತು ಪತ್ತೆಹಚ್ಚುವಿಕೆ ಸುಧಾರಿಸಲು ಭಾರತ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು. ಮಿಷನ್ ಫಾರ್ ಕಾಟನ್ ಪ್ರೊಡಕ್ಟಿವಿಟಿ ಮತ್ತು ಕಸ್ತೂರಿ ಕಾಟನ್ ಭಾರತ್ ಉಪಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಆಹಾರ ಮತ್ತು ಕೃಷಿ ಸಂಸ್ಥೆ (FAO), ಅಂತರರಾಷ್ಟ್ರೀಯ ಹತ್ತಿ ಸಲಹಾ ಸಮಿತಿ (ICAC) ಸೇರಿದಂತೆ ವಿವಿಧ ಸಂಸ್ಥೆಗಳ ಪ್ರತಿನಿಧಿಗಳು ಸಣ್ಣ ರೈತರು ಮತ್ತು ಕುಶಲಕರ್ಮಿಗಳಿಗೆ ಬೆಂಬಲ, ಸಂಸ್ಕರಣಾ ಸಾಮರ್ಥ್ಯ ವೃದ್ಧಿ, ತಂತ್ರಜ್ಞಾನ ಅಳವಡಿಕೆ ಹಾಗೂ ಅಂತರರಾಷ್ಟ್ರೀಯ ಪಾಲುದಾರಿಕೆಗಳ ಕುರಿತು ಚರ್ಚಿಸಿದರು.

ಭಾರತದ ಸಾಂಪ್ರದಾಯಿಕ ಜವಳಿ ಕಲೆಯನ್ನು ಪರಿಚಯಿಸುವ ಉದ್ದೇಶದಿಂದ, ಕಾರ್ಯಕ್ರಮದ ಕೊನೆಯಲ್ಲಿ ಭಾರತೀಯ ಕುಶಲಕರ್ಮಿಯೊಬ್ಬರು ಹತ್ತಿ ಬಟ್ಟೆಯ ಮೇಲೆ ‘ಪೆನ್ ಕಲಂಕಾರಿ’ ಕಲೆಯ ಪ್ರಾತ್ಯಕ್ಷಿಕೆ ನೀಡಿದರು.

ಸುಸ್ಥಿರ ಉತ್ಪಾದನೆಯಿಂದ ಹಿಡಿದು ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಸಂಪರ್ಕದವರೆಗೆ ಹತ್ತಿ ವಲಯವನ್ನು ಬಲಪಡಿಸಲು ಅಂತರರಾಷ್ಟ್ರೀಯ ಸಹಕಾರದ ಅಗತ್ಯವನ್ನು ಈ ಕಾರ್ಯಕ್ರಮ ಒತ್ತಿಹೇಳಿತು.