Sunday, September 20

‘ಛಾತ್ರೋನ್ ಕಿ ಗೂಂಜ್’ ವಿವಾದ: ಅವಮಾನಿಸುವುದು ಪ್ರಜಾಪ್ರಭುತ್ವ ವಿರೋಧಿ ಎಂದ ಬಾಬಾ ರಾಮ್‌ದೇವ್

ನವದೆಹಲಿ: ಆಡಳಿತ ಪಕ್ಷವಾಗಲಿ, ವಿರೋಧ ಪಕ್ಷವಾಗಲಿ ಅಥವಾ ಯಾವುದೇ ರಾಜಕೀಯ ಸಿದ್ಧಾಂತವಾಗಲಿ, ಯಾರನ್ನೂ ಅವಮಾನಿಸುವ ಅಥವಾ ನಿಂದಿಸುವ ರೀತಿಯ ವರ್ತನೆಗೆ ಪ್ರಜಾಪ್ರಭುತ್ವದಲ್ಲಿ ಅವಕಾಶವಿಲ್ಲ ಎಂದು ಯೋಗ ಗುರು ಬಾಬಾ ರಾಮ್‌ದೇವ್ ಹೇಳಿದ್ದಾರೆ.

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ‘ಛಾತ್ರೋನ್ ಕಿ ಗೂಂಜ್’ (ವಿದ್ಯಾರ್ಥಿಗಳ ಧ್ವನಿ) ಕಾರ್ಯಕ್ರಮದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗೌರವಿಸಬೇಕು ಎಂದು ಹೇಳಿದರು.

“ನಾವು ನಮ್ಮ ಸಭ್ಯತೆ ಮತ್ತು ಮರ್ಯಾದೆಯನ್ನು ಕಳೆದುಕೊಳ್ಳಬಾರದು. ದೇಶದಲ್ಲಿ ವಿವಿಧ ಸಿದ್ಧಾಂತಗಳು ಹಾಗೂ ರಾಜಕೀಯ ಪಕ್ಷಗಳಿವೆ. ಅವುಗಳಿಗೆ ಗೌರವ ನೀಡಬೇಕು” ಎಂದು ರಾಮ್‌ದೇವ್ ಹೇಳಿದರು.

#WATCH | Delhi | On Lok Sabha LoP Rahul Gandhi’s ‘Chhatron Ki Goonj’ event, Yog Guru Baba Ramdev says, “Whether it is the ruling party or the opposition, or any ideology whatsoever, the country’s Constitution and democracy dictate that no one should be insulted; we must not lose… pic.twitter.com/Bu6q7xkGQt

— ANI (@ANI) September 20, 2026

ಪ್ರಧಾನಮಂತ್ರಿಯ ತಾಯಿ ಸೇರಿದಂತೆ ಯಾವುದೇ ವ್ಯಕ್ತಿಯ ತಾಯಿ, ಸಹೋದರಿ ಅಥವಾ ಮಗಳಿಗೆ ಗೌರವ ನೀಡಬೇಕು. ಅದೇ ರೀತಿ ಎಸ್‌ಸಿ, ಎಸ್‌ಟಿ ಮತ್ತು ಬುಡಕಟ್ಟು ಸಮುದಾಯಗಳಿಗೆ ಇರುವ ಗೌರವದಷ್ಟೇ ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯ ಸಮುದಾಯಗಳಿಗೂ ಇರಬೇಕು ಎಂದು ಅವರು ಹೇಳಿದರು.

ಪುರುಷ ಮತ್ತು ಮಹಿಳೆ, ವಿದ್ಯಾವಂತ ಮತ್ತು ಅನಕ್ಷರಸ್ಥ ಎಂಬ ಭೇದವಿಲ್ಲದೆ ಪ್ರತಿಯೊಬ್ಬರಿಗೂ ಸಮಾನ ಗೌರವ ಸಿಗಬೇಕು ಎಂದು ಪ್ರತಿಪಾದಿಸಿದರು.

ಚರ್ಮದ ಬಣ್ಣ, ಭಾಷೆ, ಜಾತಿ, ವರ್ಗ ಅಥವಾ ರಾಜಕೀಯ ಒಲವಿನ ಆಧಾರದ ಮೇಲೆ ಯಾರನ್ನಾದರೂ ಅಗೌರವಿಸುವುದು, ಅಸಭ್ಯ ಅಥವಾ ನಿಂದನೀಯ ಭಾಷೆ ಬಳಸುವುದು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿದೆ ಎಂದು ರಾಮ್‌ದೇವ್ ಅಭಿಪ್ರಾಯಪಟ್ಟರು.

ಇಂತಹ ವರ್ತನೆ ಸಂವಿಧಾನದ ಮೌಲ್ಯಗಳಿಗೆ ವಿರುದ್ಧವಾಗಿರುವುದಲ್ಲದೆ, ಅನುಚಿತ ಮತ್ತು ಅಮಾನವೀಯ ಕೃತ್ಯವೂ ಆಗಿದೆ ಎಂದು ಅವರು ಹೇಳಿದರು.