Wednesday, September 23

ಚಿಕ್ಕಮಗಳೂರು ರೈತರ ವಿದ್ಯುತ್ ಸಮಸ್ಯೆ ಪರಿಹರಿಸಿ: ಸಚಿವ ಜಾರ್ಜ್‌ಗೆ ಡಾ. ರವಿ ಸಿ.ಟಿ. ಪತ್ರ

ಚಿಕ್ಕಮಗಳೂರು: ಲಕ್ಯಾ ಹಾಗೂ ಸಖರಾಯಪಟ್ಟಣ ಹೋಬಳಿಗಳ ರೈತರು ಎದುರಿಸುತ್ತಿರುವ ವಿದ್ಯುತ್ ಸಮಸ್ಯೆಯನ್ನು ತುರ್ತಾಗಿ ಪರಿಹರಿಸಿ, ಕೃಷಿ ಪಂಪ್‌ಸೆಟ್‌ಗಳಿಗೆ ನಿಗದಿತ ಪ್ರಮಾಣದಲ್ಲಿ ಗುಣಮಟ್ಟದ 3 ಫೇಸ್ ವಿದ್ಯುತ್ ಪೂರೈಸುವಂತೆ ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ.ಟಿ. ಅವರು ಇಂಧನ ಸಚಿವ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅವರಿಗೆ ಪತ್ರ ಬರೆದಿದ್ದಾರೆ.

ಮಳೆ ಕೊರತೆಯಿಂದ ರೈತರು ಈಗಾಗಲೇ ಸಂಕಷ್ಟದಲ್ಲಿದ್ದು, ಅನಿಯಮಿತ ವಿದ್ಯುತ್ ಪೂರೈಕೆಯಿಂದ ಕೊಳವೆಬಾವಿಗಳ ಅಲ್ಪ ನೀರಿನಿಂದ ಬೆಳೆ ಉಳಿಸಿಕೊಳ್ಳುವ ಪ್ರಯತ್ನಕ್ಕೂ ತೊಂದರೆಯಾಗುತ್ತಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ರಾತ್ರಿ ಒಂದು ಗಂಟೆ ಮಾತ್ರ ವಿದ್ಯುತ್:

ಸರ್ಕಾರದ ನಿಯಮದಂತೆ ಕೃಷಿ ಪಂಪ್‌ಸೆಟ್‌ಗಳಿಗೆ 6 ಗಂಟೆ 3 ಫೇಸ್ ವಿದ್ಯುತ್ ಪೂರೈಸಲಾಗುತ್ತಿದೆ ಎಂದು ಮೆಸ್ಕಾಂ ಅಧಿಕಾರಿಗಳು ಹೇಳುತ್ತಿದ್ದರೂ, ನೆಲಮಟ್ಟದಲ್ಲಿ ರೈತರಿಗೆ ನಿಗದಿತ ವಿದ್ಯುತ್ ದೊರೆಯುತ್ತಿಲ್ಲ ಎಂಬ ದೂರುಗಳಿವೆ. ರಾತ್ರಿ ಮೂರು ಗಂಟೆಗಳ ಬದಲು ಕೆಲವೊಮ್ಮೆ ಒಂದು ಗಂಟೆ ಮಾತ್ರ ವಿದ್ಯುತ್ ಸಿಗುತ್ತಿದ್ದು, ಕೆಲವು ದಿನಗಳಲ್ಲಿ ಅದೂ ಇಲ್ಲದಂತಾಗಿದೆ ಎಂದು ರವಿ ತಿಳಿಸಿದ್ದಾರೆ.

ಲಕ್ಯಾ ಹೋಬಳಿ, ಬಿಳೇಕಲ್ಲಹಳ್ಳಿ, ಹಿರೇಗೌಜ ಹಾಗೂ ಲಕ್ಕಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಡಿಮೆ ವೋಲ್ಟೇಜ್ ಸಮಸ್ಯೆಯೂ ತೀವ್ರವಾಗಿದ್ದು, ಅದನ್ನು ತಕ್ಷಣ ಪರಿಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಗಾಣದಾಳು ಉಪಕೇಂದ್ರ ಕಾರ್ಯಾರಂಭಕ್ಕೆ ಆಗ್ರಹ:

ಲಕ್ಯಾ ಹೋಬಳಿಯ ವಿದ್ಯುತ್ ಸಮಸ್ಯೆ ಪರಿಹರಿಸುವ ಉದ್ದೇಶದಿಂದ ನಿರ್ಮಿಸಿರುವ ಗಾಣದಾಳು ಎಂ.ಯು.ಎಸ್.ಎಸ್. ವಿದ್ಯುತ್ ಉಪಕೇಂದ್ರದ ಕಾಮಗಾರಿ ಪೂರ್ಣಗೊಂಡಿದ್ದರೂ ಇನ್ನೂ ಕಾರ್ಯಾರಂಭವಾಗಿಲ್ಲ ಎಂದು ರವಿ ಗಮನ ಸೆಳೆದಿದ್ದಾರೆ.

ಉಪಕೇಂದ್ರವನ್ನು ತಕ್ಷಣ ಕಾರ್ಯಾರಂಭಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು. ಇದರಿಂದ ಲಕ್ಯಾ ಹೋಬಳಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೂ ಗುಣಮಟ್ಟದ ವಿದ್ಯುತ್ ಪೂರೈಕೆ ಸಾಧ್ಯವಾಗಲಿದೆ ಎಂದು ತಿಳಿಸಿದ್ದಾರೆ.

ಟ್ರಾನ್ಸ್‌ಫಾರ್ಮರ್ ಬದಲಾವಣೆಗೆ ವಾರಗಟ್ಟಲೆ ವಿಳಂಬ:

ಟ್ರಾನ್ಸ್‌ಫಾರ್ಮರ್ ಸುಟ್ಟರೆ 24 ಗಂಟೆಯೊಳಗೆ ಬದಲಾಯಿಸಬೇಕೆಂಬ ನಿಯಮವಿದ್ದರೂ, ವಾಸ್ತವದಲ್ಲಿ ಹಲವು ಪ್ರದೇಶಗಳಲ್ಲಿ ವಾರಗಟ್ಟಲೆ ವಿಳಂಬವಾಗುತ್ತಿದೆ ಎಂದು ರವಿ ಆರೋಪಿಸಿದ್ದಾರೆ. ಕಡೂರು ತಾಲೂಕಿನಲ್ಲಿ ಸಮಸ್ಯೆ ಹೆಚ್ಚು ಕಂಡುಬರುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಓವರ್‌ಲೋಡ್ ಆಗಿರುವ ಟ್ರಾನ್ಸ್‌ಫಾರ್ಮರ್‌ಗಳನ್ನು ಹೆಚ್ಚಿನ ಸಾಮರ್ಥ್ಯದ ಟ್ರಾನ್ಸ್‌ಫಾರ್ಮರ್‌ಗಳಿಂದ ಬದಲಾಯಿಸಬೇಕು ಅಥವಾ ಹೆಚ್ಚುವರಿ ಟ್ರಾನ್ಸ್‌ಫಾರ್ಮರ್ ಅಳವಡಿಸಬೇಕು ಎಂದು ಸಲಹೆ ನೀಡಿದ್ದಾರೆ.

ಬೆಳವಾಡಿಗೂ ಬೇಕು ಹೊಸ ಉಪಕೇಂದ್ರ:

ಚಿಕ್ಕಮಗಳೂರು ತಾಲೂಕಿನ ಬೆಳವಾಡಿ ಗ್ರಾಮದ ಸಮೀಪ ಹೊಸ ಎಂ.ಯು.ಎಸ್.ಎಸ್. ಉಪಕೇಂದ್ರ ಸ್ಥಾಪಿಸಿದರೆ ಸ್ಥಳೀಯ ವಿದ್ಯುತ್ ಸಮಸ್ಯೆ ಪರಿಹಾರವಾಗುವುದರ ಜತೆಗೆ ಕಳಸಾಪುರ ಉಪಕೇಂದ್ರದ ಮೇಲಿನ ಒತ್ತಡವೂ ಕಡಿಮೆಯಾಗಲಿದೆ ಎಂದು ರವಿ ಹೇಳಿದ್ದಾರೆ.

ಮಳೆ ಕೊರತೆಯಿಂದ ಸಂಕಷ್ಟದಲ್ಲಿರುವ ರೈತರಿಗೆ ವಿದ್ಯುತ್ ಸಮಸ್ಯೆ ಮತ್ತಷ್ಟು ಹೊರೆ ಆಗದಂತೆ, ಕೃಷಿ ಪಂಪ್‌ಸೆಟ್‌ಗಳಿಗೆ ನಿಗದಿತ ಪ್ರಮಾಣದಲ್ಲಿ ನಿರಂತರ ಹಾಗೂ ಗುಣಮಟ್ಟದ ವಿದ್ಯುತ್ ಪೂರೈಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಸಚಿವ ಕೆ.ಜೆ. ಜಾರ್ಜ್ ಅವರಿಗೆ ಅವರು ಮನವಿ ಮಾಡಿದ್ದಾರೆ.