
ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಅದರ ಹೈಕಮಾಂಡ್ ಪಾತ್ರವಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಆರೋಪಿಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿಗಮದ ₹89.62 ಕೋಟಿ ಹಣ ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆಯಾಗಿರುವುದನ್ನು ಸರ್ಕಾರವೇ ಉತ್ತರದಲ್ಲಿ ಒಪ್ಪಿಕೊಂಡಿದೆ ಎಂದರು. ಪ್ರಕರಣದಲ್ಲಿ ಅಂದಿನ ವ್ಯವಸ್ಥಾಪಕ ನಿರ್ದೇಶಕ ಸೇರಿದಂತೆ 14 ಮಂದಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಎಸ್ಐಟಿ ತನಿಖೆಯಲ್ಲಿ ಹಣ ದುರುಪಯೋಗವಾಗಿರುವುದು ಸಾಬೀತಾಗಿದೆ ಎಂದು ಹೇಳಿದರು.
ಹಗರಣದ ಹಣವನ್ನು ತೆಲಂಗಾಣ ಚುನಾವಣೆ, ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯನ ಚುನಾವಣೆ ಹಾಗೂ ಬಳ್ಳಾರಿ ಲೋಕಸಭಾ ಚುನಾವಣೆಗೆ ಬಳಸಲಾಗಿದೆ. ಅಲ್ಲದೆ, ಬ್ರಾಂಡಿ ಅಂಗಡಿ, ಜ್ಯುವೆಲ್ಲರಿ ಅಂಗಡಿ ಮತ್ತು ಕಾರು ಶೋರೂಂಗಳಿಗೂ ಹಣ ಹೋಗಿದೆ ಎಂದು ಸಿ.ಟಿ. ರವಿ ಆರೋಪಿಸಿದರು.

“ರಾತ್ರಿ ಕಳ್ಳನನ್ನು ಹಿಡಿದು, ಹಗಲು ಮತ್ತೆ ಸಚಿವರನ್ನಾಗಿ ಮಾಡಿದರೆ ಕಾಂಗ್ರೆಸ್ ಪಕ್ಷ ಮತ್ತು ಹೈಕಮಾಂಡ್ ಹಗರಣದಲ್ಲಿ ಭಾಗಿಯಾಗಿರುವ ಅನುಮಾನ ಮೂಡುತ್ತದೆ” ಎಂದು ಟೀಕಿಸಿದರು.
ಭ್ರಷ್ಟ ಸಚಿವರ ವಜಾಕ್ಕೆ ಆಗ್ರಹಿಸಿ ಹೋರಾಟ
ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ನಾಗೇಂದ್ರ ಅವರನ್ನು ವಜಾಗೊಳಿಸಬೇಕು ಎಂದು ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಸದನದಲ್ಲಿ ಹೋರಾಟ ನಡೆಸಲಾಗುತ್ತಿದೆ. ಸಚಿವರ ವಜಾ ಆಗುವವರೆಗೆ ಹೋರಾಟ ಮುಂದುವರಿಸುವುದಾಗಿ ಹೇಳಿದರು.
ಹಗರಣದ ತನಿಖೆ ವೇಳೆ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಕುಟುಂಬಕ್ಕೆ ಇನ್ನೂ ಭವಿಷ್ಯನಿಧಿ ಹಣ ಸಿಕ್ಕಿಲ್ಲ. ಆದರೆ ಹಗರಣದ ಆರೋಪ ಎದುರಿಸುತ್ತಿರುವ ವ್ಯಕ್ತಿ ಸಚಿವರಾಗಿದ್ದಾರೆ ಎಂದು ಸಿ.ಟಿ. ರವಿ ಆಕ್ರೋಶ ವ್ಯಕ್ತಪಡಿಸಿದರು.
ಗೃಹಲಕ್ಷ್ಮಿ ಸೇರಿದಂತೆ ವಿವಿಧ ಸರ್ಕಾರಿ ಯೋಜನೆಗಳ ಹಣದಲ್ಲೂ ಇದೇ ರೀತಿಯ ದುರುಪಯೋಗ ನಡೆದಿರುವ ಸಾಧ್ಯತೆಯಿದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
