
ಬೆಂಗಳೂರು: ಕನಿಷ್ಠ ₹15,000 ಮಾಸಿಕ ಗೌರವಧನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ (AIUTUC) ನೇತೃತ್ವದಲ್ಲಿ ಅಕ್ಟೋಬರ್ 5ರಿಂದ 12ರವರೆಗೆ ರಾಜ್ಯಾದ್ಯಂತ ಪ್ರತಿಭಟನಾ ಸಪ್ತಾಹ ನಡೆಸಲಾಯಿತು.
ಕಳೆದ ಒಂಬತ್ತು ವರ್ಷಗಳಲ್ಲಿ ಕೇವಲ ₹1,500 ಗೌರವಧನ ಹೆಚ್ಚಿಸಲಾಗಿದೆ. ಬೆಲೆ ಏರಿಕೆಗೆ ಅನುಗುಣವಾಗಿ ಗೌರವಧನ ಹೆಚ್ಚಿಸದಿರುವುದು ಆಶಾ ಕಾರ್ಯಕರ್ತೆಯರ ಸಂಕಷ್ಟವನ್ನು ಹೆಚ್ಚಿಸಿದೆ ಎಂದು ಸಂಘದ ಪ್ರತಿನಿಧಿಗಳು ಅಸಮಾಧಾನ ವ್ಯಕ್ತಪಡಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರೋತ್ಸಾಹಧನ ಹಾಗೂ ಗೌರವಧನ ಸೇರಿಸಿ ಮಾಸಿಕ ₹15,000 ನೀಡಬೇಕು ಮತ್ತು ಬಾಕಿ ಪ್ರೋತ್ಸಾಹಧನವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಆಶಾ ಕಾರ್ಯಕರ್ತೆಯರಿಗೆ ಉತ್ತಮ ಗುಣಮಟ್ಟದ ಮೊಬೈಲ್ ಫೋನ್ ಒದಗಿಸಬೇಕು. ಮೊಬೈಲ್ ಆಧಾರಿತ ಕೆಲಸಗಳಲ್ಲಿನ ಸಮಸ್ಯೆಗಳನ್ನು ಪರಿಹರಿಸಬೇಕು. ಆರ್ಸಿಎಚ್ ಪೋರ್ಟಲ್ ಮೂಲಕ ಕೆಲಸಕ್ಕೆ ಅನುಗುಣವಾಗಿ ಕೇಂದ್ರದ ಪ್ರೋತ್ಸಾಹಧನ ದೊರೆಯದಿರುವ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ಕಫದ ಮಾದರಿ ತರಲು ಒತ್ತಾಯಿಸುವುದನ್ನು ತಡೆಯಬೇಕು ಹಾಗೂ ನಿಯಮವಿಲ್ಲದೆ ಜಿಪಿಎಸ್ ಸ್ಥಳದ ಮಾಹಿತಿ ದಾಖಲಿಸಲು ಒತ್ತಡ ಹೇರಬಾರದು ಎಂದು ಸಂಘವು ಮನವಿ ಮಾಡಿದೆ. ಗೌರವಧನವನ್ನು ಪ್ರತಿ ತಿಂಗಳು ನಿಗದಿತ ಸಮಯಕ್ಕೆ ಪಾವತಿಸುವಂತೆಯೂ ಆಗ್ರಹಿಸಿದೆ.
ಕೇರಳ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಹರಿಯಾಣ ಮತ್ತು ದೆಹಲಿಯಲ್ಲಿ ₹15,000ಕ್ಕೂ ಹೆಚ್ಚು ಮಾಸಿಕ ಗೌರವಧನ ನೀಡಲಾಗುತ್ತಿದೆ ಎಂದು ಸಂಘದ ಪ್ರತಿನಿಧಿಗಳು ತಿಳಿಸಿದ್ದಾರೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಜಿಬಿಎ (ಬಿಬಿಎಂಪಿ) ಆಶಾ ಸಂಘದ ಜಿಲ್ಲಾ ಅಧ್ಯಕ್ಷೆ ರಮಾ ಟಿ.ಸಿ., ಜಿಲ್ಲಾ ಕಾರ್ಯದರ್ಶಿ ಪರಾನ, ಬೆಂಗಳೂರು ನಗರ ಜಿಲ್ಲಾ ಕಾರ್ಯದರ್ಶಿ ಶಶಿಕಲಾ ಹಾಗೂ ನೆಲಮಂಗಲ ತಾಲೂಕು ಕಾರ್ಯದರ್ಶಿ ವೀಣಾ ಭಾಗವಹಿಸಿದ್ದರು. ಬೇಡಿಕೆಗಳನ್ನು ಈಡೇರಿಸದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಸಂಘಟನೆ ಎಚ್ಚರಿಸಿದೆ.
