
ಮಂಡ್ಯ: ನಾಡಿನ ಜೀವನದಿ ಕಾವೇರಿ ಮಾತೆಗೆ ಭಕ್ತಿಪೂರ್ವಕ ಪೂಜೆ ಸಲ್ಲಿಸುವ ಮೂಲಕ ಕೆಆರ್ಎಸ್ ಅಣೆಕಟ್ಟಿನ ಬೃಂದಾವನ ಉದ್ಯಾನವನದಲ್ಲಿ ‘ಕಾವೇರಿ ಆರತಿ’ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಧರ್ಮಪತ್ನಿ ಉಷಾ ಅವರೊಂದಿಗೆ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ, ನಾಡಿನ ಸಮೃದ್ಧಿಗಾಗಿ ಪ್ರಾರ್ಥಿಸಿದರು.
ಕಾವೇರಿ ಆರತಿ ಕಾರ್ಯಕ್ರಮವು ಕರ್ನಾಟಕದ ಸಂಸ್ಕೃತಿ, ಪರಂಪರೆ ಹಾಗೂ ಪ್ರಕೃತಿಯೊಂದಿಗಿನ ಅವಿನಾಭಾವ ಸಂಬಂಧದ ಪ್ರತೀಕವಾಗಿದೆ. ತಾಯಿ ಕಾವೇರಿಯ ಜಲಧಾರೆ ಸದಾ ನಾಡಿನ ನೆಲವನ್ನು ಹಸಿರಾಗಿಸಲಿ, ಜನಜೀವನ ಸಮೃದ್ಧಗೊಳಿಸಲಿ ಹಾಗೂ ರೈತರ ಬದುಕಿನಲ್ಲಿ ಸುಖ-ಸಂತೋಷದ ಬೆಳಕು ಮೂಡಿಸಲಿ ಎಂದು ಸಿಎಂ ಡಿ.ಕೆ.ಶಿವಕುಮಾರ್ ಪ್ರಾರ್ಥಿಸಿದರು.

ಕಾರ್ಯಕ್ರಮಕ್ಕೆ ಮೈಸೂರಿನ ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ನಿಶ್ಚಲಾನಂದನಾಥ ಸ್ವಾಮೀಜಿ, ಕಾಗಿನೆಲೆ ಮಹಾಸಂಸ್ಥಾನದ ಮೈಸೂರು ವಿಭಾಗದ ಕನಕ ಗುರುಪೀಠದ ಶ್ರೀ ಶಿವಾನಂದಪುರಿ ಸ್ವಾಮೀಜಿ ಹಾಗೂ ಕಲಬುರಗಿಯ ಉರಿಲಿಂಗ ಪೆದ್ದೀಶ್ವರ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು.
ಸಚಿವರಾದ ಎನ್. ಚಲುವರಾಯಸ್ವಾಮಿ, ಶಿವಲಿಂಗೇಗೌಡ, ನರೇಂದ್ರಸ್ವಾಮಿ, ಸಂಸದ ಹಾಗೂ ಮುಖ್ಯಮಂತ್ರಿಗಳ ಮುಖ್ಯ ಸಲಹೆಗಾರ ಜಿ.ಸಿ. ಚಂದ್ರಶೇಖರ್, ಶಾಸಕರು ಹಾಗೂ ಚೆಸ್ಕಾಂ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ, ಶಾಸಕರಾದ ಕದಲೂರು ಉದಯ್, ದರ್ಶನ್ ಪುಟ್ಟಣ್ಣಯ್ಯ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಮಳವಳ್ಳಿ ಶಿವಣ್ಣ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
