Saturday, October 3

ಕುಪ್ಮಾ ಬೆಂಗಳೂರು ಜಿಲ್ಲಾ ಸಮಿತಿಯಿಂದ ಅ. 9ರಂದು ‘ಉತ್ತಮ ಉಪನ್ಯಾಸಕ ಪ್ರಶಸ್ತಿ’ ಪ್ರದಾನ; 10 ಉಪನ್ಯಾಸಕರ ಆಯ್ಕೆ

ಬೆಂಗಳೂರು: ಕರ್ನಾಟಕ ಅನುದಾನರಹಿತ ಪದವಿಪೂರ್ವ ಕಾಲೇಜುಗಳ ಆಡಳಿತ ಮಂಡಳಿಗಳ ಸಂಘಟನೆ (ಕುಪ್ಮಾ) ವತಿಯಿಂದ ನೀಡಲಾಗುವ ಬೆಂಗಳೂರು ಜಿಲ್ಲಾ ಮಟ್ಟದ ‘ಅತ್ಯುತ್ತಮ ಉಪನ್ಯಾಸಕ ಪ್ರಶಸ್ತಿ-2026’ಗೆ 10 ಉಪನ್ಯಾಸಕರು ಆಯ್ಕೆಯಾಗಿದ್ದಾರೆ.

ರಾಜಾಜಿನಗರದ ಕದಂಬ ಹೋಟೆಲ್‌ನಲ್ಲಿ ನಡೆದ ಕುಪ್ಮಾ ಬೆಂಗಳೂರು ಜಿಲ್ಲಾ ಸಮಿತಿಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಉಪನ್ಯಾಸಕರ ವೃತ್ತಿಪರ ಅನುಭವ, ಬೋಧನಾ ಕ್ಷೇತ್ರಕ್ಕೆ ನೀಡಿರುವ ಕೊಡುಗೆ, ಪ್ರತಿಭೆ ಹಾಗೂ ಸೇವೆಯನ್ನು ಪರಿಗಣಿಸಿ ಸರ್ವಾನುಮತದಿಂದ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಲಾಗಿದೆ.

 

ಪ್ರಶಸ್ತಿಗೆ ಆಯ್ಕೆಯಾದವರಲ್ಲಿ ವಿದ್ಯಾಸೌಧ ಪಿಯು ಕಾಲೇಜಿನ ಡಾ. ಲಕ್ಷ್ಮೀ ಪ್ರಸನ್ನ, ಕಡಂಬಿ ಪಿಯು ಕಾಲೇಜಿನ ರೂಪಾ ಪೈ, ಪ್ರೆಸಿಡೆನ್ಸಿ ಪಿಯು ಕಾಲೇಜಿನ ಕೃತಿಕಾ, ವಿಜಯ ಜ್ಯೋತಿ ಪಿಯು ಕಾಲೇಜಿನ ನರೇಂದ್ರ, ದಯಾನಂದ ಸಾಗರ್ ಪಿಯು ಕಾಲೇಜಿನ ಶ್ರೀಪ್ರಿಯಾ, ಶೇಷಾದ್ರಿಪುರಂ ಪಿಯು ಕಾಲೇಜಿನ ಜಿ.ಕೆ. ಮಂಜುನಾಥ್, ಸೌಂದರ್ಯ ಪಿಯು ಕಾಲೇಜಿನ ಉಷಾರಾಣಿ, ಎಎಸ್ಸಿ ಪಿಯು ಕಾಲೇಜಿನ ನೇತ್ರ, ಗಂಗಾ ಪಿಯು ಕಾಲೇಜಿನ ಡಾ. ವೇದಾವತಿ ಹಾಗೂ ಜೆಎಸ್ ಪಿಯು ಕಾಲೇಜಿನ ಡಾ. ಪದ್ಮಾವತಿ ಸೇರಿದ್ದಾರೆ.

ಆಯ್ಕೆಯಾದ ಉಪನ್ಯಾಸಕರಿಗೆ ಅಕ್ಟೋಬರ್ 9ರಂದು ಮಧ್ಯಾಹ್ನ 2.30ಕ್ಕೆ ರಾಜಾಜಿನಗರದ ಟೋಲ್‌ಗೇಟ್ ಬಳಿ ಇರುವ ಎಎಸ್ಸಿ ಪಿಯು ಕಾಲೇಜಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಕಾರ್ಯಕ್ರಮದಲ್ಲಿ ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಗೌರವ ಕಾರ್ಯದರ್ಶಿ ನಾಡೋಜ ಡಾ. ವೂಡೇ ಪಿ. ಕೃಷ್ಣ, ಮಂಗಳೂರಿನ ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಡಾ. ಉಷಾಪ್ರಭಾ ಎನ್. ನಾಯಕ್ ಸೇರಿದಂತೆ ಕುಪ್ಮಾ ರಾಜ್ಯ ಹಾಗೂ ಜಿಲ್ಲಾ ಸಮಿತಿಗಳ ಪದಾಧಿಕಾರಿಗಳು ಮತ್ತು ಗಣ್ಯರು ಭಾಗವಹಿಸಲಿದ್ದಾರೆ.

ಕುಪ್ಮಾ ರಾಜ್ಯ ಸಮಿತಿಯ ನಿರ್ದೇಶನದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅತ್ಯುತ್ತಮ ಉಪನ್ಯಾಸಕರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಬೆಂಗಳೂರು ಜಿಲ್ಲಾ ಸಮಿತಿಯಿಂದ ಇದೇ ಮೊದಲ ಬಾರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ಮುಂದಿನ ವರ್ಷಗಳಲ್ಲಿಯೂ ಈ ಗೌರವವನ್ನು ಮುಂದುವರಿಸಲಾಗುವುದು ಎಂದು ಬೆಂಗಳೂರು ಜಿಲ್ಲಾ ಸಮಿತಿ ಕಾರ್ಯದರ್ಶಿ ಡಾ. ದೇವರಾಜ್, ಬೆಂಗಳೂರು ಉತ್ತರ ಅಧ್ಯಕ್ಷ ಕೀರ್ತನ್ ಕುಮಾರ್ ಹಾಗೂ ಬೆಂಗಳೂರು ದಕ್ಷಿಣ ಅಧ್ಯಕ್ಷ ಡಾ. ಜಯರಾಮ್ ಶೆಟ್ಟಿ ತಿಳಿಸಿದ್ದಾರೆ.