
ಚಿತ್ರದುರ್ಗ: ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಅಗತ್ಯ ಮಾನದಂಡಗಳ ಆಧಾರದ ಮೇಲೆಯೇ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ತಿಳಿಸಿದ್ದಾರೆ.
ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಚಿತ್ರದುರ್ಗ ಜಿಲ್ಲೆಯಲ್ಲಿ ಚಳ್ಳಕೆರೆ, ಹಿರಿಯೂರು ಹಾಗೂ ಹೊಸದುರ್ಗ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಚಿತ್ರದುರ್ಗ, ಮೊಳಕಾಲ್ಮೂರು ಹಾಗೂ ಹೊಳಲ್ಕೆರೆ ತಾಲೂಕುಗಳನ್ನೂ ಬರಪೀಡಿತ ಪಟ್ಟಿಗೆ ಸೇರಿಸಬೇಕು ಎಂಬ ಬೇಡಿಕೆಗಳು ಬಂದಿದ್ದು, ಈ ಕುರಿತು ಸರ್ಕಾರ ಸೂಕ್ತ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.
ರೈತರು ಯಾವುದೇ ಕಾರಣಕ್ಕೂ ಆತಂಕಪಡಬೇಕಿಲ್ಲ. ಸರ್ಕಾರ ರೈತರ ಹಿತದೃಷ್ಟಿಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಸಚಿವರು ತಿಳಿಸಿದರು.

ವೈಜ್ಞಾನಿಕ ಮಾನದಂಡಗಳ ಆಧಾರ
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಬರ ನಿರ್ವಹಣೆ ಕೈಪಿಡಿ–2020ರ ಮಾರ್ಗಸೂಚಿಯಂತೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಜೂನ್ 1ರಿಂದ ಆಗಸ್ಟ್ 12ರವರೆಗೆ ವೈಜ್ಞಾನಿಕವಾಗಿ ಬರ ಪರಿಶೀಲನೆ ನಡೆಸಿದೆ.
ಬರ ಮೌಲ್ಯಮಾಪನವನ್ನು ಮೂರು ಹಂತಗಳಲ್ಲಿ ನಡೆಸಲಾಗುತ್ತದೆ. ಮೊದಲ ಹಂತದಲ್ಲಿ ಮಳೆ ಕೊರತೆ ಹಾಗೂ ಶುಷ್ಕ ಅವಧಿ ಸೇರಿದಂತೆ ಕಡ್ಡಾಯ ಸೂಚಕಗಳನ್ನು ಪರಿಶೀಲಿಸಲಾಗುತ್ತದೆ. ಎರಡನೇ ಹಂತದಲ್ಲಿ ಬಿತ್ತನೆಯಾದ ಬೆಳೆಗಳ ಸ್ಥಿತಿ, ಉಪಗ್ರಹ ಆಧಾರಿತ ಸಸ್ಯವರ್ಗ ಸೂಚ್ಯಂಕ, ಮಣ್ಣಿನ ತೇವಾಂಶ ಹಾಗೂ ಜಲವಿಜ್ಞಾನಕ್ಕೆ ಸಂಬಂಧಿಸಿದ ಸೂಚಕಗಳನ್ನು ಮೌಲ್ಯಮಾಪನ ಮಾಡಲಾಗುತ್ತದೆ.
ಈ ಆಧಾರದ ಮೇಲೆ ತಾಲೂಕುಗಳನ್ನು ಮಧ್ಯಮ ಅಥವಾ ತೀವ್ರ ಬರಪೀಡಿತ ಎಂದು ವರ್ಗೀಕರಿಸಲಾಗುತ್ತದೆ. ಬಳಿಕ ಮೂರನೇ ಹಂತದಲ್ಲಿ ಗ್ರೌಂಡ್ ಟ್ರೂಥಿಂಗ್ ಮೂಲಕ ತಳಮಟ್ಟದಲ್ಲಿ ಬರದ ಪರಿಣಾಮವನ್ನು ಪರಿಶೀಲಿಸಲಾಗುತ್ತದೆ.
KSNDMC ನಡೆಸಿದ ಸಮಗ್ರ ಮೌಲ್ಯಮಾಪನ ಹಾಗೂ ಇ-ಆಡಳಿತ ಇಲಾಖೆಯ ‘Crop Loss GT’ ಮೊಬೈಲ್ ಆ್ಯಪ್ ಮೂಲಕ ನಡೆಸಿದ ಪರಿಶೀಲನೆಯ ಆಧಾರದ ಮೇಲೆ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಇನ್ನಷ್ಟು ತಾಲೂಕು ಸೇರ್ಪಡೆ ಸಾಧ್ಯ
ಸೆಪ್ಟೆಂಬರ್ ಮಳೆ ಮುನ್ಸೂಚನೆ ಹಾಗೂ ಕೃಷಿ ಬೆಳೆಗಳ ಮೇಲಿನ ಪರಿಣಾಮವನ್ನು ಗಮನದಲ್ಲಿಟ್ಟುಕೊಂಡು 2026ರ ಖಾರೀಫ್ ಋತುವಿನ ಅಂತ್ಯದವರೆಗೆ ಬರ ಪರಿಸ್ಥಿತಿಯನ್ನು ಮತ್ತೊಮ್ಮೆ ಪರಿಶೀಲಿಸಲಾಗುವುದು. ನಿಯಮಾನುಸಾರ ಪರಿಶೀಲನೆ ಹಾಗೂ ಗ್ರೌಂಡ್ ಟ್ರೂಥಿಂಗ್ ಬಳಿಕ ಅಗತ್ಯವಿದ್ದರೆ ಹೆಚ್ಚುವರಿ ತಾಲೂಕುಗಳನ್ನು ಹಂತ ಹಂತವಾಗಿ ಬರಪೀಡಿತ ಪಟ್ಟಿಗೆ ಸೇರಿಸಲು ಅವಕಾಶವಿದೆ ಎಂದು ಸಚಿವ ಟಿ. ರಘುಮೂರ್ತಿ ಸ್ಪಷ್ಟಪಡಿಸಿದ್ದಾರೆ.
