
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಮ್ಮಾಜೆ ಸಮೀಪದ ವಿವೇಕ ಭವನದಲ್ಲಿ ನಾಗಶ್ರೀ ಮಿತ್ರ ವೃಂದ ಚಾರಿಟೆಬಲ್ ಟ್ರಸ್ಟ್ ಹಾಗೂ ನಾಗಶ್ರೀ ಮಾತೃ ವೃಂದದ ಸಂಯುಕ್ತ ಆಶ್ರಯದಲ್ಲಿ ಭಾನುವಾರ ವನಮಹೋತ್ಸವ–2026 ಕಾರ್ಯಕ್ರಮ ನಡೆಯಿತು.
ಪರಿಸರ ಸಂರಕ್ಷಣೆ ಮತ್ತು ಅರಣ್ಯಗಳ ಮಹತ್ವದ ಕುರಿತು ಯುವಪೀಳಿಗೆಯಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.

ಸ್ಪರ್ಧಾತ್ಮಕ ಜಗತ್ತಿನಲ್ಲಿ ಕಾಡುಗಳ ಮಹತ್ವವನ್ನು ಯುವ ಪೀಳಿಗೆಗೆ ತಿಳಿಸಿಕೊಡುವುದು ಅಗತ್ಯವಾಗಿದೆ. ಕಾಡಿನ ವಿನಾಶದಿಂದ ಉಂಟಾಗುವ ತೊಂದರೆಗಳನ್ನು ಪ್ರಸ್ತುತ ಜಗತ್ತಿನಲ್ಲಿ ಕಾಣಬಹುದು. ಮುಂದಿನ ದಿನಗಳಲ್ಲಿ ಆಕ್ಸಿಜನ್ ಸಿಲಿಂಡರ್ ಅನ್ನು ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ಬಂದೊದಗುತ್ತದೆ. ಇಂತಹ ಪರಿಸ್ಥಿತಿ ಬರಬಾರದೆಂದರೆ ಸಸಿಗಳನ್ನು ನೆಡುವುದು ಅಗತ್ಯವಾಗುತ್ತದೆ. ನಮ್ಮ ಮನೆಯಂಗಳದಲ್ಲಿ ನೆಡಲು ಸಾಧ್ಯವಿಲ್ಲದಿದ್ದರೆ ಕಾಡು ಪ್ರದೇಶದಲ್ಲಿ ಆದರೂ ನೆಡಬೇಕು ಇದರಿಂದ ಎಲ್ಲರಿಗೂ ಒಳಿತಾಗುತ್ತದೆ ಎಂಬ ಆಶಯದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇಡೀ ಗ್ರಾಮದ ಜನತೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಗಮನಸೆಳೆದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕು, ಪೊಳಲಿ ವಲಯದ ಮೇಲ್ವಿಚಾರಕಿ ರೂಪ ರೈ, ಅರಣ್ಯ ನಾಶದಿಂದಲೇ ಇಂದು ಕಾಡುಪ್ರಾಣಿಗಳು ನಾಡಿಗೆ ಬರುತ್ತಿವೆ. ಪರಿಸರ ಸಮತೋಲನ ಕಾಪಾಡಲು ಪ್ರತಿಯೊಬ್ಬರೂ ತಮ್ಮ ಮನೆ ಅಥವಾ ಸಾಧ್ಯವಾದರೆ ಅರಣ್ಯ ಪ್ರದೇಶಗಳಲ್ಲಿ ಸಸಿ ನೆಟ್ಟು ಪೋಷಿಸಬೇಕು ಎಂದು ಕರೆ ನೀಡಿದರು.

“ಹುಟ್ಟುಹಬ್ಬ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ದುಂದು ವೆಚ್ಚ ಮಾಡುವ ಬದಲು ಸಸಿ ನೆಟ್ಟು ಬೆಳೆಸಿದರೆ ಅದು ಪರಿಸರ ಹಾಗೂ ಮಾನವ ಆರೋಗ್ಯ ಎರಡಕ್ಕೂ ಅನುಕೂಲಕರವಾಗುತ್ತದೆ” ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಭಾರತೀಯ ಜನತಾ ಪಕ್ಷದ ತೆಂಕಬೆಳ್ಳೂರು ಶಕ್ತಿ ಕೇಂದ್ರದ ಸಂಚಾಲಕ ಮುರಳೀಧರ ಶೆಟ್ಟಿ, ನಾಗಶ್ರೀ ಮಿತ್ರ ವೃಂದದ ಅಧ್ಯಕ್ಷ ಹರೀಶ್ ಮುಡೈಕೋಡಿ, ನಾಗಶ್ರೀ ಮಾತೃ ವೃಂದದ ಅಧ್ಯಕ್ಷೆ ಸೌಮ್ಯಾ ತಿಮ್ಮಪ್ಪ ಕಮ್ಮಾಜೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂತ್ಯದಲ್ಲಿ ಅತಿಥಿಗಳು ಸಸಿ ನೆಟ್ಟು ವನಮಹೋತ್ಸವಕ್ಕೆ ಚಾಲನೆ ನೀಡಿದರು. ಬಳಿಕ ಗ್ರಾಮಸ್ಥರಿಗೆ ಉಚಿತವಾಗಿ ಸಸಿಗಳನ್ನು ವಿತರಿಸಲಾಯಿತು. ಬಾಲಗೋಕುಲದ ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದ್ದು, ನಾಗಶ್ರೀ ಸಂಘದ ಕ್ರೀಡಾ ಕಾರ್ಯದರ್ಶಿ ರಂಜಿತ್ ಸ್ವಾಗತಿಸಿ ವಂದಿಸಿದರು.
