Sunday, August 2

“ಕರ್ನಾಟಕದ ಹಕ್ಕಿಗೆ ಧಕ್ಕೆ ಬೇಡ”: ತಮಿಳುನಾಡು ಸಿಎಂಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪತ್ರ

ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ಹಾಗೂ ಮೇಕೆದಾಟು ಯೋಜನೆ ವಿಚಾರವಾಗಿ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಕರ್ನಾಟಕದ ಜನರ ಹಿತಾಸಕ್ತಿ, ಕುಡಿಯುವ ನೀರಿನ ಅಗತ್ಯ ಹಾಗೂ ಸಂವಿಧಾನಬದ್ಧ ಹಕ್ಕುಗಳನ್ನು ಗೌರವಿಸುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ.

ಕಾವೇರಿ ನದಿ ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯಗಳ ಜೀವನಾಡಿಯಾಗಿದ್ದು, ಯಾವುದೇ ವಿವಾದವನ್ನು ರಾಜಕೀಯ ದೃಷ್ಟಿಕೋನದಿಂದ ನೋಡದೆ ಪರಸ್ಪರ ಸಹಕಾರದಿಂದ ಪರಿಹರಿಸಬೇಕು ಎಂದು ವಿಜಯೇಂದ್ರ ಅಭಿಪ್ರಾಯಪಟ್ಟಿದ್ದಾರೆ. ಕರ್ನಾಟಕದ ರೈತರು, ನಾಗರಿಕರು ಹಾಗೂ ಬೆಂಗಳೂರಿನ ಕುಡಿಯುವ ನೀರಿನ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಮೇಕೆದಾಟು ಯೋಜನೆ ಜಾರಿಗೊಳಿಸುವುದು ರಾಜ್ಯದ ಹಕ್ಕು ಎಂದು ಅವರು ಪ್ರತಿಪಾದಿಸಿದ್ದಾರೆ.

“ಕರ್ನಾಟಕ ಮತ್ತು ತಮಿಳುನಾಡು ಪರಸ್ಪರ ಗೌರವ ಮತ್ತು ಸದ್ಭಾವನೆಯೇ ನಮ್ಮ ಸಂಬಂಧದ ಅಡಿಪಾಯವಾಗಿ ಸಹೋದರ ರಾಜ್ಯಗಳಂತೆ ಬದುಕಿವೆ. ಕೋಟ್ಯಂತರ ತಮಿಳರು ಕರ್ನಾಟಕವನ್ನು, ವಿಶೇಷವಾಗಿ ಬೆಂಗಳೂರನ್ನು ತಮ್ಮ ಮನೆ ಮಾಡಿಕೊಂಡು ಅದರ ಗಮನಾರ್ಹ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದಾರೆ. ಅದೇ ರೀತಿ, ತಮಿಳುನಾಡಿನಲ್ಲಿ ವಾಸಿಸಿ ಕೆಲಸ ಮಾಡುತ್ತಿರುವ ಕನ್ನಡಿಗರು ನಿಮ್ಮ ರಾಜ್ಯದ ಪ್ರಗತಿ ಮತ್ತು ಸಮೃದ್ಧಿಗೆ ಕೊಡುಗೆ ನೀಡಿದ್ದಾರೆ. ಈ ಪರಸ್ಪರ ಅವಲಂಬನೆಯು ರಾಜ್ಯದ ಗಡಿಗಳನ್ನು ಮೀರಿದ ಆಳವಾದ ಜನ-ಜನರ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ” ಎಂದು ವಿಜಯೇಂದ್ರ ಗಮನಸೆಳೆದಿದ್ದಾರೆ.

ಕಾವೇರಿ ನೀರಿನ ವಿಚಾರದಲ್ಲಿ ಕರ್ನಾಟಕದ ನಿಲುವನ್ನು ಪದೇಪದೇ ವಿರೋಧಿಸುತ್ತಿರುವ ತಮಿಳುನಾಡು ಸರ್ಕಾರದ ಕ್ರಮ ಸರಿಯಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿರುವ ವಿಜಯೇಂದ್ರ, ನ್ಯಾಯಾಲಯಗಳು ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ತೀರ್ಪುಗಳನ್ನು ಗೌರವಿಸುವುದು ಎರಡೂ ರಾಜ್ಯಗಳ ಜವಾಬ್ದಾರಿ ಎಂದು ಹೇಳಿದ್ದಾರೆ.

ರಾಜಕೀಯ ಲಾಭಕ್ಕಾಗಿ ಜನರ ಭಾವನೆಗಳನ್ನು ಕೆರಳಿಸುವ ಪ್ರಯತ್ನ ಬೇಡ ಎಂದು ಮನವಿ ಮಾಡಿರುವ ಅವರು, ಕರ್ನಾಟಕದ ಅಭಿವೃದ್ಧಿ ಯೋಜನೆಗಳಿಗೆ ಅನಗತ್ಯ ಅಡ್ಡಿಪಡಿಸುವ ಬದಲು ಉಭಯ ರಾಜ್ಯಗಳ ಹಿತಾಸಕ್ತಿಯನ್ನು ಕಾಪಾಡುವ ದಿಕ್ಕಿನಲ್ಲಿ ಕಾರ್ಯನಿರ್ವಹಿಸಬೇಕೆಂದು ತಮಿಳುನಾಡು ಸರ್ಕಾರಕ್ಕೆ ಕರೆ ನೀಡಿದ್ದಾರೆ.

ಮೇಕೆದಾಟು ಯೋಜನೆಯು ಬೆಂಗಳೂರಿನ ಭವಿಷ್ಯದ ಕುಡಿಯುವ ನೀರಿನ ಅಗತ್ಯವನ್ನು ಪೂರೈಸುವ ಮಹತ್ವದ ಯೋಜನೆಯಾಗಿದ್ದು, ಇದನ್ನು ವಿರೋಧಿಸುವುದು ಸಮಂಜಸವಲ್ಲ ಎಂದು ವಿಜಯೇಂದ್ರ ಅಭಿಪ್ರಾಯಪಟ್ಟಿದ್ದಾರೆ. ಕಾವೇರಿ ನೀರಿನ ಹಂಚಿಕೆ ವಿಚಾರದಲ್ಲಿ ನ್ಯಾಯ, ಸಂವಿಧಾನ ಮತ್ತು ಪರಸ್ಪರ ಗೌರವದ ತತ್ವಗಳನ್ನು ಪಾಲಿಸುವ ಮೂಲಕ ಉಭಯ ರಾಜ್ಯಗಳ ನಡುವಿನ ಸೌಹಾರ್ದವನ್ನು ಉಳಿಸಿಕೊಳ್ಳಬೇಕೆಂದು ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.