Tuesday, May 12

ಪ್ರಧಾನಿ ಮೋದಿ ಅವರ ಏಳು ಮನವಿಗಳು ದೇಶ ಬಲಪಡಿಸಲಿವೆ: ಅಸೋಚಾಮ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಮಾಡಿದ ಏಳು ಮನವಿಗಳು ವಿಕಸಿತ ಭಾರತದ ನಿರ್ಮಾಣಕ್ಕೆ ಮಹತ್ವದ ಕೊಡುಗೆ ನೀಡಲಿವೆ ಎಂದು ದೇಶದ ಉದ್ಯಮ ಸಂಸ್ಥೆಗಳ ಒಕ್ಕೂಟ ಅಸೋಚಾಮ್  ಬಣ್ಣಿಸಿದೆ.

ಜಾಗತಿಕ ಆರ್ಥಿಕ ಅಸ್ಥಿರತೆ, ಪೂರೈಕೆ ಸರಪಳಿ ಸಮಸ್ಯೆಗಳು ಮತ್ತು ಅಂತರರಾಷ್ಟ್ರೀಯ ಸಂಘರ್ಷಗಳಿಂದ ಉಂಟಾಗುತ್ತಿರುವ ಬೆಲೆ ಏರಿಕೆಯನ್ನು ಎದುರಿಸಲು ಪ್ರಧಾನಿ ಮೋದಿ ಜನರ ಸಹಭಾಗಿತ್ವಕ್ಕೆ ಕರೆ ನೀಡಿದ್ದಾರೆ. ಪೆಟ್ರೋಲಿಯಂ ಉತ್ಪನ್ನಗಳ ಬಳಕೆಯಲ್ಲಿ ಮಿತವ್ಯಯ ಹಾಗೂ ಅನಗತ್ಯ ವ್ಯರ್ಥವನ್ನು ಕಡಿಮೆ ಮಾಡುವಂತೆ ಅವರು ಮನವಿ ಮಾಡಿದ್ದಾರೆ ಎಂದು ಅಸೋಚಾಮ್ ಅಧ್ಯಕ್ಷ ನಿರ್ಮಲ್ ಕೆ. ಮಿಂಡಾ ಹೇಳಿದ್ದಾರೆ. “ಈ ಏಳು ಮನವಿಗಳು ಭಾರತದ ಸ್ಥಿರತೆ, ಸ್ಪರ್ಧಾತ್ಮಕತೆ ಮತ್ತು ಆರ್ಥಿಕ ಬಲವನ್ನು ಹೆಚ್ಚಿಸುವ ಮಂತ್ರಗಳಂತಿವೆ” ಎಂದು ವಿಶ್ಲೇಷಿಸಿದ್ದಾರೆ.

ಇವಿ ವಾಹನಗಳು, ರೈಲು ಮತ್ತು ಸಾರ್ವಜನಿಕ ಸಾರಿಗೆ ಬಳಕೆಯನ್ನು ಹೆಚ್ಚಿಸುವುದರಿಂದ ಮಾಲಿನ್ಯ ಕಡಿಮೆಯಾಗುವುದರ ಜೊತೆಗೆ ಇಂಧನ ಭದ್ರತೆಗೂ ಸಹಕಾರಿಯಾಗಲಿದೆ ಎಂದು ಅವರು ಹೇಳಿದ್ದಾರೆ.

ರಾಸಾಯನಿಕ ಗೊಬ್ಬರ ಬಳಕೆ ಮತ್ತು ವಿದೇಶ ಪ್ರವಾಸಗಳನ್ನು ಕಡಿಮೆ ಮಾಡುವ ಮನವಿಯು ವಿದೇಶಿ ವಿನಿಮಯ ಮೀಸಲು ಉಳಿಸಲು ನೆರವಾಗಲಿದೆ. ಜೊತೆಗೆ ‘ಆತ್ಮನಿರ್ಭರ ಭಾರತ’ ಗುರಿ ಸಾಧನೆಗೂ ಇದು ಸಹಕಾರಿ ಎಂದು ಅಸೋಚಾಮ್ ಅಧ್ಯಕ್ಷರು ಅಭಿಪ್ರಾಯಪಟ್ಟಿದ್ದಾರೆ.

ಚಿನ್ನದ ಅತಿಯಾದ ಖರೀದಿಯನ್ನು ನಿಯಂತ್ರಿಸುವಂತೆ ಪ್ರಧಾನಿ ಮಾಡಿದ ಮನವಿಯನ್ನು ಕೂಡ ಅಸೋಚಾಮ್ ಸ್ವಾಗತಿಸಿದೆ. ಭಾರತವು ಪ್ರತಿ ವರ್ಷ ದೊಡ್ಡ ಪ್ರಮಾಣದಲ್ಲಿ ಚಿನ್ನ ಆಮದು ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇದು ವಿದೇಶಿ ವಿನಿಮಯದ ಮೇಲಿನ ಒತ್ತಡ ಕಡಿಮೆ ಮಾಡಲಿದೆ ಎಂದು ಅವರು ಹೇಳಿದ್ದಾರೆ.

ಜಾಗತಿಕ ಉದ್ವಿಗ್ನತೆ ನಡುವೆಯೂ ಭಾರತದಲ್ಲಿ ಇಂಧನ ಬೆಲೆಗಳನ್ನು ಸ್ಥಿರವಾಗಿಡಲು ತೈಲ ಕಂಪನಿಗಳು ಭಾರೀ ನಷ್ಟವನ್ನು ಭರಿಸುತ್ತಿವೆ ಎಂದು ಅಸೋಚಾಮ್ ಅಧ್ಯಕ್ಷರು ಹೇಳಿಕೆಯಲ್ಲಿ ತಿಳಿಸಿದ್ದಾರೆ.