Sunday, May 10

ರಾಜ್ಯ ಸಚಿವ ಡಿ. ಸುಧಾಕರ್ ನಿಧನ; ರಾಜಕೀಯ ವಲಯದಲ್ಲಿ ಶೋಕ

ಬೆಂಗಳೂರು: ಕರ್ನಾಟಕದ ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ. ಸುಧಾಕರ್ ಅವರು ಭಾನುವಾರ ಮುಂಜಾನೆ ಬೆಂಗಳೂರಿನ KIMS Hospital ನಲ್ಲಿ ನಿಧನರಾಗಿದ್ದಾರೆ.

65 ವರ್ಷ ವಯಸ್ಸಿನ ಅವರು, ಕಳೆದ ಒಂದು ತಿಂಗಳಿನಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಮೊದಲು ಮೊಣಕಾಲು ಶಸ್ತ್ರಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಡಿ. ಸುಧಾಕರ್ ಅವರಿಗೆ ಬಳಿಕ ಶ್ವಾಸಕೋಶದ ಸೋಂಕು ಕಾಣಿಸಿಕೊಂಡಿತ್ತು. ನಂತರ ಅವರನ್ನು ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಕಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಭಾನುವಾರ ಬೆಳಗ್ಗೆ ಮೃತಪಟ್ಟಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಪ್ರಭಾವಿ ರಾಜಕೀಯ ನಾಯಕರಾಗಿದ್ದ ಡಿ. ಸುಧಾಕರ್ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ರಾಜ್ಯ ರಾಜಕೀಯದಲ್ಲಿ ಚತುರ ತಂತ್ರಗಾರರಾಗಿ ಗುರುತಿಸಿಕೊಂಡಿದ್ದರು.

ಸಚಿವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಸಚಿವರು, ರಾಜಕೀಯ ಮುಖಂಡರು ಮತ್ತು ಗಣ್ಯರು ಸಂತಾಪ ಸೂಚಿಸಿದ್ದಾರೆ.