Friday, June 26

ಮೋದಿ ತೆರಳಿದ ಮಾರ್ಗದಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆ ಪ್ರಕರಣ; 4 ತಂಡಗಳಿಂದ ತನಿಖೆ

ಬೆಂಗಳೂರು: ಬೆಂಗಳೂರಿನ ಹೊರವಲಯದ ಆರ್ಟ್ ಆಫ್ ಲಿವಿಂಗ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಯಲ್ಲಿ ಗಂಭೀರ ಲೋಪ ಸಂಭವಿಸಿದ್ದು, ಮೋದಿ ತೆರಳಿದ ಕೆಲವೇ ಗಂಟೆಗಳಲ್ಲಿ ಅವರ ಮಾರ್ಗದಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿರುವ ಘಟನೆ ಆತಂಕ ಸೃಷ್ಟಿಸಿದೆ. ಕಗ್ಗಲೀಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ನಾಲ್ಕು ವಿಶೇಷ ತನಿಖಾ ತಂಡಗಳನ್ನು ರಚಿಸಿ ವಿಚಾರಣೆ ಆರಂಭಿಸಿದ್ದಾರೆ.

ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನೂತನ ಧ್ಯಾನ ಮಂದಿರ ಉದ್ಘಾಟನೆ ಹಾಗೂ ಸಂಸ್ಥೆಯ 45ನೇ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಆಗಮಿಸಿದ್ದರು. ಕಾರ್ಯಕ್ರಮ ಮುಗಿಸಿ ವಾಪಸ್ ತೆರಳಿದ ಬಳಿಕ ತಾತಗುಣಿ ಬಳಿಯ ರಸ್ತೆ ಪಕ್ಕದಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿರುವುದು ಸಂಶಯಕ್ಕೆ ಕಾರಣವಾಗಿದೆ. ಬೆಳಗ್ಗೆ 10 ಗಂಟೆಯ ಸುಮಾರಿಗೆ ಪೆಟ್ರೋಲಿಂಗ್ ವೇಳೆ ಪೊಲೀಸರು ವಸ್ತುವನ್ನು ಪತ್ತೆಹಚ್ಚಿ ತಕ್ಷಣವೇ ವಶಕ್ಕೆ ಪಡೆದಿದ್ದಾರೆ.

ಘಟನಾ ಸ್ಥಳವನ್ನು ಸುತ್ತುವರಿದು ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ನಂತರ ಸುಕೋ ತಂಡ ಮತ್ತು ಎಫ್‌ಎಸ್‌ಎಲ್ ತಂಡವೂ ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿವೆ. ಜಿಲೆಟಿನ್ ಕಡ್ಡಿಗಳು ರಸ್ತೆಗೆ ಹೇಗೆ ಬಂದವು, ಯಾರು ಬಿಟ್ಟು ಹೋಗಿದ್ದಾರೆ, ಯಾವುದೇ ಅನುಮಾನಾಸ್ಪದ ಚಟುವಟಿಕೆಗಳು ನಡೆದಿವೆಯೇ ಎಂಬುದನ್ನು ಪತ್ತೆಹಚ್ಚಲು ಸಿಸಿಟಿವಿ ದೃಶ್ಯಾವಳಿಗಳನ್ನು ಶೋಧಿಸಲಾಗುತ್ತಿದೆ.

ತನಿಖೆಯ ಭಾಗವಾಗಿ ಹತ್ತಿರದ ಕಲ್ಲು ಕ್ವಾರಿಗಳ ಮಾಲೀಕರು ಮತ್ತು ಕಾರ್ಮಿಕರಿಂದಲೂ ವಿಚಾರಣೆ ನಡೆಸಲಾಗುತ್ತಿದ್ದು, ಹಲವು ಕೋನಗಳಿಂದ ಪರಿಶೀಲನೆ ಮುಂದುವರಿದಿದೆ.