Sunday, September 6

ಭದ್ರಾ ಮೇಲ್ದಂಡೆ ಯೋಜನೆ: ಭದ್ರಾ ನೀರು ಹರಿವಿಗೆ ಚಾಲನೆ

ಚಿತ್ರದುರ್ಗ: ಐದಾರು ದಶಕಗಳಿಂದ ಬಯಲುಸೀಮೆ ಜನರು ಕಂಡಿದ್ದ ಭದ್ರಾ ಮೇಲ್ದಂಡೆ ಯೋಜನೆಯ ಕನಸು ನನಸಾಗುವತ್ತ ಮಹತ್ವದ ಹೆಜ್ಜೆ ಇಡಲಾಗಿದೆ. ಭದ್ರಾ ಜಲಾಶಯದಿಂದ ಚಿತ್ರದುರ್ಗ ಶಾಖಾ ಕಾಲುವೆಗೆ ಪ್ರಾಯೋಗಿಕವಾಗಿ ನೀರು ಹರಿಸುವ ಕಾರ್ಯಕ್ಕೆ ಭಾನುವಾರ ಚಾಲನೆ ನೀಡಲಾಯಿತು.

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿ ಅಣೆಕಟ್ಟಿನ ಇನ್‌ಟೇಕ್ ಪಾಯಿಂಟ್‌ನಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ ಪೂಜೆ ನೆರವೇರಿಸಿ ನೀರು ಹರಿವಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಭದ್ರಾ ಮೇಲ್ದಂಡೆ ಯೋಜನೆ ಬಯಲುಸೀಮೆಯ ಜನರ ದಶಕಗಳ ಕನಸಾಗಿದ್ದು, ಇಂದು ಇತಿಹಾಸದಲ್ಲಿ ನೆನಪಿಡಬೇಕಾದ ದಿನವಾಗಿದೆ ಎಂದರು. ಯೋಜನೆಗೆ ಮುನ್ನುಡಿ ಬರೆದ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಎಂ.ಕೃಷ್ಣ, ಸಚಿವರಾಗಿದ್ದ ಟಿ.ಬಿ.ಜಯಚಂದ್ರ ಸೇರಿದಂತೆ ಯೋಜನೆಗಾಗಿ ಹೋರಾಡಿದ ರೈತರು, ಸ್ವಾಮೀಜಿಗಳು, ಜನಪ್ರತಿನಿಧಿಗಳು ಹಾಗೂ ಎಲ್ಲರ ಕೊಡುಗೆಯನ್ನು ಸ್ಮರಿಸಿದರು.

ಯೋಜನೆಯಡಿ ತುಂಗಾದಿಂದ 17.4 ಟಿಎಂಸಿ ಹಾಗೂ ಭದ್ರಾದಿಂದ 12.5 ಟಿಎಂಸಿ ಸೇರಿದಂತೆ ಒಟ್ಟು 29.9 ಟಿಎಂಸಿ ನೀರು ಹಂಚಿಕೆಯಾಗಿದೆ. ಪ್ರಸ್ತುತ ಯೋಜನಾ ವೆಚ್ಚ ₹21,500 ಕೋಟಿಯಾಗಿದ್ದು, ಚಿಕ್ಕಮಗಳೂರು, ತುಮಕೂರು, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳ 12 ತಾಲೂಕುಗಳಿಗೆ ಅನುಕೂಲವಾಗಲಿದೆ. ಸುಮಾರು 2.25 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವುದರ ಜತೆಗೆ 367 ಕೆರೆಗಳಿಗೆ ನೀರು ತುಂಬಿಸುವ ಉದ್ದೇಶ ಹೊಂದಿದೆ.

ತುಂಗಾದಿಂದ 17.4 ಟಿಎಂಸಿ ನೀರು ತರುವ ಕಾಮಗಾರಿಯ ಎರಡು ಟವರ್‌ಗಳ ಕೆಲಸ ಮುಂದಿನ ಎರಡು ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಇದರಿಂದ ತುಂಗೆಯ ನೀರೂ ಜಿಲ್ಲೆಯತ್ತ ಹರಿಯಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

ಧರಂಸಿಂಗ್, ಬಿ.ಎಸ್.ಯಡಿಯೂರಪ್ಪ ಹಾಗೂ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರಗಳ ಅವಧಿಯಿಂದ ಸಿದ್ದರಾಮಯ್ಯ ಸರ್ಕಾರದವರೆಗೆ ವಿವಿಧ ಹಂತಗಳಲ್ಲಿ ಯೋಜನೆಗೆ ಅನುದಾನ ದೊರೆತಿದೆ. ಆರಂಭದಲ್ಲಿ ₹2,814 ಕೋಟಿಯಾಗಿದ್ದ ಯೋಜನಾ ವೆಚ್ಚ ಬಳಿಕ ₹5,500 ಕೋಟಿ, ₹12,500 ಕೋಟಿ ಹಾಗೂ 2022ರಲ್ಲಿ ₹21,500 ಕೋಟಿಗೆ ಪರಿಷ್ಕೃತಗೊಂಡಿದೆ. ಯೋಜನೆ ಸಾಕಾರಗೊಳ್ಳಲು ವಿವಿಧ ಸರ್ಕಾರಗಳು ಹಾಗೂ ಪಕ್ಷಗಳು ಪಕ್ಷಾತೀತವಾಗಿ ಸಹಕರಿಸಿವೆ ಎಂದರು.

ಯೋಜನೆಗೆ ಇದುವರೆಗೆ ಸುಮಾರು ₹11,500 ಕೋಟಿ ವೆಚ್ಚವಾಗಿದ್ದು, ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗಳು ಪ್ರಗತಿಯಲ್ಲಿವೆ. ಕೇಂದ್ರ ಸರ್ಕಾರ 2022-23ರ ಬಜೆಟ್‌ನಲ್ಲಿ ಘೋಷಿಸಿದ್ದ ₹5,300 ಕೋಟಿ ಅನುದಾನ ಬಿಡುಗಡೆಯಾದರೆ ಕಾಮಗಾರಿಗೆ ಇನ್ನಷ್ಟು ವೇಗ ಸಿಗುತ್ತಿತ್ತು. ರಾಜ್ಯ ಸರ್ಕಾರ ಇನ್ನೂ ಕೇಂದ್ರದ ಅನುದಾನದ ನಿರೀಕ್ಷೆಯಲ್ಲಿದೆ ಎಂದು ಹೇಳಿದರು.

ಭದ್ರಾ ಮೇಲ್ದಂಡೆ ಯೋಜನೆಗೆ ಎದುರಾಗಿದ್ದ ಹಲವು ಅಡೆತಡೆಗಳನ್ನು ನಿವಾರಿಸುವಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬದ್ಧತೆ ಶ್ಲಾಘನೀಯ ಎಂದು ರಘುಮೂರ್ತಿ ಹೇಳಿದರು.

ಜಲಸಂಪನ್ಮೂಲ ಸಚಿವರಾಗಿದ್ದ ಅವಧಿಯಲ್ಲಿ ಡಿ.ಕೆ.ಶಿವಕುಮಾರ್ ಅವರು ತರೀಕೆರೆ ಶಾಸಕ ಶ್ರೀನಿವಾಸ್ ಹಾಗೂ ಇತರ ಜನಪ್ರತಿನಿಧಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ರೈತರೊಂದಿಗೆ ಮಾತುಕತೆ ನಡೆಸಿ ಸಮಸ್ಯೆಗಳನ್ನು ಬಗೆಹರಿಸಿದ್ದರು. ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ಅವರ ಸಹಕಾರದಿಂದ ಬರಪೀಡಿತ ನಾಲ್ಕು ಜಿಲ್ಲೆಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನೀರಿನ ಹಂಚಿಕೆ ಮಾಡಲಾಗಿದೆ ಎಂದರು.

2028ರ ವೇಳೆಗೆ ಯೋಜನೆಯನ್ನು ಸಂಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ವಿಧಾನಸಭೆಯಲ್ಲೂ ಒತ್ತಾಯಿಸಲಾಗಿದೆ. ನಾಲ್ಕು ಜಿಲ್ಲೆಗಳ ರೈತರ ಹಿತದೃಷ್ಟಿಯಿಂದ ಯೋಜನೆಯನ್ನು ಪಕ್ಷಾತೀತವಾಗಿ ಪೂರ್ಣಗೊಳಿಸಲು ಎಲ್ಲರೂ ಶ್ರಮಿಸಬೇಕು ಎಂದು ಸಚಿವರು ಹೇಳಿದರು.

ಚಿತ್ರದುರ್ಗ ಶಾಖಾ ಕಾಲುವೆ ಕಾಮಗಾರಿಗೆ ಶ್ರಮಿಸಿದ ದಿವಂಗತ ಡಿ.ಸುಧಾಕರ್, ಟಿ.ಬಿ.ಜಯಚಂದ್ರ ಸೇರಿದಂತೆ ಹಿರಿಯ ನಾಯಕರ ಕೊಡುಗೆಯನ್ನು ಸ್ಮರಿಸಿದ ಅವರು, ಹರಿಯುತ್ತಿರುವ ನೀರು ಒಂದು ವಾರದಲ್ಲಿ ಗೋನೂರು ತಲುಪುವ ನಿರೀಕ್ಷೆಯಿದೆ. ಬಳಿಕ ಯೋಜನೆಗೆ ಕಾರಣಕರ್ತರಾದ ಮಾಜಿ ಮುಖ್ಯಮಂತ್ರಿಗಳು ಹಾಗೂ ಎಲ್ಲ ನಾಯಕರನ್ನು ಆಹ್ವಾನಿಸಿ ಚಿತ್ರದುರ್ಗದಲ್ಲಿ ಪಕ್ಷಾತೀತ ಬೃಹತ್ ಸಾರ್ವಜನಿಕ ಸಭೆ ಹಾಗೂ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.

ಹಿರಿಯ ದೆಹಲಿ ವಿಶೇಷ ಪ್ರತಿನಿಧಿ ಹಾಗೂ ಶಿರಾ ಶಾಸಕ ಟಿ.ಬಿ.ಜಯಚಂದ್ರ, ತರೀಕೆರೆ ಶಾಸಕ ಶ್ರೀನಿವಾಸ್, ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ, ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ, ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ.ರಘು, ಜಿಲ್ಲಾ ಗ್ಯಾರಂಟಿ ಯೋಜನೆ ಪ್ರಾಧಿಕಾರದ ಅಧ್ಯಕ್ಷ ಗಂಜಿಗಟ್ಟೆ ಶಿವಣ್ಣ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.